ನಮ್ಮ ದೇಹದ ತೂಕದ ಸುಮಾರು 60 ಶೇಕಡಾದಷ್ಟು ನೀರಿನಾಂಶ ಇದ್ದು, ದೇಹದ ಹೆಚ್ಚಿ ಎಲ್ಲಾ ಜೈವಿಕ ಕ್ರಿಯೆಗಳಿಗೆ ನೀರು ಅತೀ ಅಗತ್ಯ. ಸುಮಾರು 70 ಕೆ.ಜಿ ತೂಕದ ವ್ಯಕ್ತಿಯಲ್ಲಿ ಸರಿಸುಮಾರು 40 ಲೀಟರ್‍ಗಳಷ್ಟು ಅಂದರೆ ದೇಹದ ತೂಕದ 60 ಶೇಕಡಾದಷ್ಟು ನೀರು ಇರುತ್ತದೆ. ನಮ್ಮ ದೇಹದಲ್ಲಿನ ನೀರು ಬೇರೆ ಬೇರೆ ಕಾರಣಗಳಿಂದ ಬೇರೆ ಬೇರೆ ರೂಪದಲ್ಲಿ (ಬೆವರು, ಮೂತ್ರ ಇತ್ಯಾದಿಯಾಗಿ) ದೇಹದಿಂದ ಹೊರ ಹಾಕಲ್ಪಟ್ಟ ನೀರಿನ ಪ್ರಮಾಣಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಸೇವಿಸುವುದು ಅತೀ ಅಗತ್ಯ. ಈ ಪ್ರಮಾಣದಲ್ಲಿ ಏರುಪೇರು ಉಂಟಾದಲ್ಲಿ ದೇಹದೊಳಗಿನ, ನೀರಿನ ಅಂಶ ಕಡಮೆಯಾದಲ್ಲಿ ಆ ದೈಹಿಕ ಸ್ಥಿತಿಯನ್ನು “ನಿರ್ಜಲೀಕರಣ” ಅಥವಾ ಆಂಗ್ಲ ಭಾಷೆಯಲ್ಲಿ “ಡೀಹೈಡ್ರೇಷನ್” ಎಂದು ಕರೆಯುತ್ತಾರೆ. ಕಾರಣಾಂತರಗಳಿಂದ ನಮ್ಮ ನೀರಿನ ಸೇವನೆಯ ಪ್ರಮಾಣ ಕಡಮೆಯಾದಾಗ ನಿರ್ಜಲೀಕರಣ ಉಂಟಾಗುತ್ತದೆ. ಸರಿಯಾದ ಸುರಕ್ಷಿತ ನೀರಿನ ಕೊರತೆ, ಕೆಲಸದೊತ್ತಡದಿಂದ ನೀರು ಸೇವಿಸದಿರುವುದು, ಪ್ರಯಾಣದ ಸಂದರ್ಭದಲ್ಲಿ ಸುರಕ್ಷಿತ ನೀರಿನ ಅಲಭ್ಯತೆ, ಅಸೌಖ್ಯದಿಂದಾಗಿ ನೀರು ಸೇವಿಸದಿರುವುದು ಅಥವಾ ಇನ್ನಾವುದೇ ಕಾರಣದಿಂದ ನೀರಿನ ಸೇವನೆ ಕಡಮೆಯಾದಲ್ಲಿ ನಿರ್ಜಲೀಕರಣ ಉಂಟಾಗಬಹುದು. ನಮ್ಮ ದೇಹಕ್ಕೆ ಪ್ರತಿದಿನ ಕನಿಷ್ಠ ಪಕ್ಷ ಸುಮಾರು 3 ರಿಂದ 4 ಲೀಟರ್ ನೀರಿನ ಅವಶ್ಯಕತೆ ಇರುತ್ತದೆ. ದಿನಕ್ಕೆ ನೀವು ಇಂತಿಷ್ಟೇ ನೀರು ಕುಡಿಯಬೇಕು ಎಂದು ನಿಖರವಾಗಿ ಹೇಳಲು ಕಷ್ಟವಾಗಬಹುದು, ಯಾಕೆಂದರೆ ಒಬ್ಬ ವ್ಯಕ್ತಿಯ ದೈನಂದಿನ ನೀರಿನ ಅವಶ್ಯಕತೆ ಆತನ ವಯಸ್ಸು, ಶರೀರದ ಗಾತ್ರ, ತೂಕ, ಆರೋಗ್ಯ ಮತ್ತು ಹವಾಮಾನ ಮುಂತಾದ ಅಂಶಗಳಿಗೆ ನೇರವಾಗಿ ಸಂಬಂಧ ಹೊಂದಿರುತ್ತದೆ. ಸಾಮಾನ್ಯವಾಗಿ ಆರೋಗ್ಯವಂಥ 40 ಕೆ.ಜಿ. ತೂಕದ ಮಧ್ಯ ವಯಸ್ಕ ಮನುಷ್ಯರಿಗೆ ಸುಮಾರು 3 ರಿಂದ 4 ಲೀಟರ್ ನೀರಿನ ಅವಶ್ಯಕತೆ ಹೆಚ್ಚಾಗಬಹುದು ಮತ್ತು ಚಳಿಗಾಲದಲ್ಲಿ ನೀರಿನ ಅವಶ್ಯಕತೆ ಕಡಮೆಯಾಗಬಹುದು. ಒಟ್ಟಿನಲ್ಲಿ ನಮ್ಮ ದೇಹದ ಎಲ್ಲಾ ಜೈವಿಕ ಕ್ರಿಯೆಗಳಿಗೆ ಮತ್ತು ನಮ್ಮ ದೇಹದ ಆರೋಗ್ಯವನ್ನು ಸಮತೋಲನದಲ್ಲಿ ಇಟ್ಟುಗೊಳ್ಳಲು ಸುರಕ್ಷಿತವಾದ ನೀರನ್ನು ಸೂಕ್ತ ಪ್ರಮಾಣದಲ್ಲಿ ಸೇವಿಸುವುದು ಅತೀ ಅನಿವಾರ್ಯ.
ನಿರ್ಜಲೀಕರಣ ಯಾಕಾಗಿ ಆಗುತ್ತದೆ :-
1. ಬೇಸಗೆಯ ವಾತಾವರಣದಲ್ಲಿ ತಾಪಮಾನ ಜಾಸ್ತಿಯಾಗಿ ವಿಪರೀತ ಬೆವರುವಿಕೆಯಿಂದಾಗಿ ದೇಹದ ನೀರಿನಾಂಶ ಮತ್ತು ಲವಣಾಂಶ ನಷ್ಟವಾಗಿ, ನಿರ್ಜಲೀಕರಣ ಉಂಟಾಗುತ್ತದೆ. ಸಮುದ್ರ ಮಟ್ಟದಲ್ಲಿರುವ ಕರಾವಳಿಯ ಪ್ರದೇಶಗಳಲ್ಲಿ ವಾತಾವರಣದ ತಾಪಮಾನ ಹೆಚ್ಚಾಗಿರುವುದರ ಜೊತೆಗೆ ಲವಣದ ಸಾಂದ್ರತೆಯೂ ಹೆಚ್ಚಾಗಿ ಇರುವುದರಿಂದ (Humidity) ದೇಹದಿಂದ ನೀರಿನ ನಷ್ಟವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
2. ಕೆಪೇನ್ ಪದಾರ್ಥಗಳಾದ ಕಾಫಿ, ಟೀ, ಚಾಕೊಲೇಟ್‍ಗಳ ಅತಿಯಾದ ಸೇವನೆ.
3. ಇಂಗಾಲಯುಕ್ತ ಪಾನೀಯಗಳಾದ ಪೆಪ್ಸಿ, ಕೋಲಾ, ಸೋಡಾ ಮುಂತಾದವುಗಳ ಅತಿಯಾದ ಬಳಕೆ.
4. ಅತಿಯಾದ ವಾಂತಿ, ಭೇದಿಯಿಂದಾಗಿ ದೇಹದಲ್ಲಿನ ನೀರಿನಾಂಶ ಮತ್ತು ಲವಣಾಂಶ (ಇಲೆಕ್ರೋ ಲೈಟ್ಸ್) ನಾಶವಾಗುತ್ತದೆ ಅಥವಾ ಸೋರಿ ಹೋಗುತ್ತದೆ ಮತ್ತು ನಿರ್ಜಲೀಕರಣವಾಗುವ ಸಾಧ್ಯತೆ ಹೆಚ್ಚು.
5. ವಿಪರೀತ ಜ್ವರ ಬಂದಾಗ, ಅತಿಯಾದ ಬೆವರುವಿಕೆಯಿಂದ, ನೀರಿನ ನಷ್ಟವಾಗಿ ನಿರ್ಜಲೀಕರಣವಾಗಬಹುದು.
6. ಅತಿಯಾದ ಮಧುಮೇಹ ರೋಗ ಅಥವಾ ಅತಿಯಾದ ಔಷಧಿ ಸೇವನೆಯಿಂದಲೂ ನಿರ್ಜಲೀಕರಣವಾಗುವ ಸಾಧ್ಯತೆ ಇದೆ.
7. ಅತಿಯಾದ ಲವಣಾಂಶ ಸೇವನೆ, ಆಹಾರದಲ್ಲಿ ಪೋಷಕಾಂಶಗಳ ಕೊರತೆಯಾದಾಗ ಕೂಡಾ ನೀರಿನ ಕೊರತೆಯಾಗಬಹುದು.
8. ಅತಿಯಾದ ಉಪವಾಸ ಮಾಡಿದಾಗ ಮತ್ತು ಕೆಲಸದ ಒತ್ತಡದಿಂದ ಅತಿಯಾದ ಚಿಂತೆ, ಉದ್ವೇಗ, ಭಾದಿಸಿದಾಗಲೂ ನಿರ್ಜಲೀಕರಣವಾಗುವ ಸಾಧ್ಯತೆ ಇದೆ.
ಸಾಮಾನ್ಯವಾಗಿ ಮಕ್ಕಳಲ್ಲಿ ದೇಹದ ತೂಕ ಕಡಮೆ ಇರುವ ಕಾರಣದಿಂದಾಗಿ, ನಿರ್ಜಲೀಕರಣವಾದಾಗಲೂ ನಿಮಗೆ ಯಾವುದೇ ಲಕ್ಷಣಗಳು ನಿಖರವಾಗಿ ಕಾಣಿಸಲಿಕ್ಕಿಲ್ಲ. ಮಕ್ಕಳು ಸಾಮಾನ್ಯವಾಗಿ ಚುರುಕಾಗಿದ್ದು, ಯಾವಾಗಲೂ ಬಿಸಿಲಲ್ಲಿ ಆಟವಾಡುವ ಸಾಧ್ಯತೆ ಜಾಸ್ತಿ ಇರುವ ಕಾರಣ, ಮಕ್ಕಳ ಮೇಲೆ ಹೆಚ್ಚಿನ ನಿಗಾವಹಿಸುವ ಅನಿವಾರ್ಯತೆ ಇರುತ್ತದೆ.
ಗುರುತಿಸುವುದು ಹೇಗೆ? :-
1. ಬಾಯಿ ಒಣಗುವುದು, ವಿಪರೀತ ಬಾಯಾರಿಕೆ.
2. ಯಾವಾಗಲೂ ಉಲ್ಲಸಿತವಾಗಿರುವ ಮಕ್ಕಳು, ಸುಸ್ತಾಗಿ ಮಂಕಾಗಿದ್ದು ಯಾವುದೇ ಚಟುವಟಿಕೆ ಇಲ್ಲದೆ ಇರುವುದು.
3. ಮೂತ್ರದ ಪ್ರಮಾಣ ಕಡಮೆಯಾಗುವುದು ಮತ್ತು ಮೂತ್ರದ ಬಣ್ಣ ಬದಲಾಗಬಹುದು. ದಿನವೊಂದರಲ್ಲಿ ಸಾಮಾನ್ಯ ನಡು ವಯಸ್ಸಿನ ಆರೋಗ್ಯವಂಥ ವ್ಯಕ್ತಿ ಒಂದೂವರೆ ಲೀಟರ್‍ನಷ್ಟು ಮೂತ್ರ ವಿಸರ್ಜಸುತ್ತಾನೆ ಮತ್ತು ಮೂತ್ರದ ಬಣ್ಣ ತಿಳಿಯಾಗಿದ್ದು ಯಾವುದೇ ಬಣ್ಣವಿರುವುದಿಲ್ಲ. ನಿರ್ಜಲೀಕರಣವಾದಂತೆ ಮೂತ್ರದ ಪ್ರಮಾಣ ಕಡಮೆಯಾಗಿ, ಮೂತ್ರದ ಬಣ್ಣ ಹಳದಿ ಬಣ್ಣಕ್ಕೆ ತಿರುಗಬಹುದು.
4. ಚರ್ಮ ಒಣಗುವುದು, ಸುಕ್ಕುಗಟ್ಟುವುದು, ಚರ್ಮದ ಕಾಂತಿ ಕುಂದುತ್ತದೆ. ತಲೆನೋವು, ಮಲಭದ್ಧತೆ, ತಲೆ ಸುತ್ತುವುದು, ತಲೆ ಬಾರವಾಗುವುದು, ಇತ್ಯಾದಿ ಕಾಣಿಸಿಕೊಳ್ಳಬಹುದು.
5. ದೃಷ್ಟಿ ಮಂಜಾಗುವುದು, ಮೈಕೈ ನೋವು, ಮಾಂಸಖಂಡಗಳು ಹಿಡಿದುಕೊಳ್ಳುವುದು, ಸ್ನಾಯು ಸೆಳೆತ ಕಾಣಿಸಿಕೊಳ್ಳಬಹುದು.
6. ರಕ್ತದ ಒತ್ತಡ ಕಡಮೆಯಾಗಬಹುದು.
7. ಮಕ್ಕಳಲ್ಲಿ ನಿರಾಸಕ್ತಿ, ಬಳಲಿಕೆ, ಆಟವಾಡಲು ನಿರಾಸಕ್ತಿ, ಉತ್ಸಾಹ ಹೀನತೆ, ಯುವಕರಲ್ಲಿ ಕೆಲಸ ಮಾಡಲು ನಿರಾಸಕ್ತಿ ಇವೆಲ್ಲವೂ ಕಾಣಿಸಿದಾಗ ನಿರ್ಜಲೀಕರಣವನ್ನು ಊಹಿಸಬಹುದು ಮತ್ತು ಸೂಕ್ತ ಪ್ರಮಾಣದಲ್ಲಿ ದ್ರವಾಹಾರ ಸೇವಿಸಲೇಬೇಕು.
8. ಮಕ್ಕಳಲ್ಲಿ ನಿದ್ರಾಹೀನತೆ, ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ ಅಳುವುದು ಮತ್ತು ಸಿಡಿದೇಳುವುದು.
9. ಹೃದಯದ ಬಡಿತ ಜೋರಾಗುವುದು, ಜೋರಾದ ಉಸಿರಾಟ, ಮಕ್ಕಳು ಅಳುವಾಗ ಕಣ್ಣೀರು ಬಾರದಿರುವುದು, ಕಣ್ಣಿನ ಗೋಲುಗಳು ಕಣ್ಣಿನೊಳಗೆ ಹುಗಿದಂತೆ ಭಾಸವಾಗುವುದು.
10. ಅತಿಯಾದ ನಿರ್ಜಲೀಕರಣವಾದಲ್ಲಿ, ವಿಪರೀತವಾದ ಗೊಂದಲ ಉಂಟಾಗಬಹುದು, ಬುದ್ದಿ ಮಂಕಾಗುತ್ತದೆ ಮತ್ತು ವ್ಯಕ್ತಿ ತಾನೆಲ್ಲಿದ್ದೇನೆ ಎಂಬುದರ ಅರಿವಿಲ್ಲದಿರುವುದು ಮತ್ತು ಕೊನೆ ಹಂತದಲ್ಲಿ ಮೂರ್ಛೆ ತಪ್ಪುವುದು ಕೂಡಾ ಆಗುವ ಸಾಧ್ಯತೆ ಇದೆ.
ತಡೆಗಟ್ಟುವುದು ಹೇಗೆ? :-
1. ಪ್ರತಿ ಗಂಟೆಗೊಮ್ಮೆ ದ್ರವಾಹಾರ ಸೇವಿಸಿ ನೀರು ಅತೀ ಉತ್ತಮವಾದ ದ್ರವಾಹಾರ. ನೀರು ನಿಮ್ಮ ದೇಹದ ಎಲ್ಲಾ ಜೈವಿಕ ಕ್ರಿಯೆಗಳಿಗೆ ಅತೀ ಅಗತ್ಯ.
2. ಸಾಕಷ್ಟು ಹಣ್ಣು ಹಂಪಲುಗಳನ್ನು ಸೇವಿಸಿ, ಹಣ್ಣುಗಳಲ್ಲಿ ಪೋಷಕಾಂಶಗಳ ಮತ್ತು ನೀರಿನಾಂಶ ಎರಡೂ ಇರುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿ ಶೇಕಡಾ 80ರಷ್ಟು ನೀರಿನಾಂಶ ಇರುತ್ತದೆ ಮತ್ತು ಬೇಸಗೆಯಲ್ಲಿ ಹೆಚ್ಚು ಸೆವೀಸಬಹುದು.
3. ರಾತ್ರಿ ಚೆನ್ನಾಗಿ ನಿದ್ರೆ ಮಾಡಬೇಕು, ದಿನವೊಂದರಲ್ಲಿ 7 ರಿಂದ 8 ಗಂಟೆಗಳ ನಿದ್ರೆ ಬೇಸಗೆಯಲ್ಲಿ ಅತೀ ಅಗತ್ಯ. ಹಗಲು ಹೊತ್ತಲ್ಲಿ ತಾಪಮಾನ ಜಾಸ್ತಿಯಾಗಿದ್ದಲ್ಲಿ, ಬಿಸಿಲಿಗೆ ಹೋಗುವುದನ್ನು ಕಡಮೆ ಮಾಡಿ. ಅನಿವಾರ್ಯವಿದ್ದಲ್ಲಿ ಮಾತ್ರ ಹೋಗಬೇಕು. ಮಕ್ಕಳನ್ನೂ ಕೂಡಾ ಬಿಸಿಲಿನಲ್ಲಿ ಗಂಟೆಗಟ್ಟಲೆ ಆಟವಾಡದಂತೆ ಎಚ್ಚರಿಸಬೇಕು.
4. ಆಹಾರದಲ್ಲಿ ಉಪ್ಪಿನಾಂಶ ಜಾಸ್ತಿ ಬಳಸಬೇಡಿ. ದೇಹದಲ್ಲಿ ಸೋಡಿಯಂ ಲವಣ ಜಾಸ್ತಿಯಾದಂತೆ, ನಿರ್ಜಲೀಕರಣವಾಗುವ ಸಾಧ್ಯತೆ ಹೆಚ್ಚು.
5. ಕೆಪೇನ್‍ಯುಕ್ತ ಮತ್ತು ಇಂಗಾಲಯುಕ್ತ ಪೇಯಗಳಾದ ಕೊಕ್, ಪೆಪ್ಸಿ, ಕಾಫಿ, ಟೀ ಸೇವನೆಯನ್ನು ಕಡಮೆ ಮಾಡಿ.
6. ರಾಸಾಯನಿಕ ಮತ್ತು ಲವಣಾಂಶ ಜಾಸ್ತಿ ಇರುವ ದಿಡೀರ್ ಜಂಕ್ ಆಹಾರಗಳನ್ನು ಸೇವಿಸಬೇಡಿ. ಈ ಲವಣಗಳ ಜೊತೆ ದೇಹದಿಂದ ನೀರಿನಾಂಶವೂ ಕಳೆದು ಹೋಗಿ ನಿರ್ಜಲೀಕರಣವಾಗುವ ಸಾಧ್ಯತೆ ಹೆಚ್ಚು.
7. ನೈಸರ್ಗಿಕವಾದ ಪೇಯಗಳಾದ ತಾಜಾ ಹಣ್ಣಿನ ರಸ, ಎಳನೀರು, ಮಜ್ಜಿಗೆ ಮುಂತಾದವುಗಳನ್ನು ಹೆಚ್ಚು ಸೇವಿಸಿ, ಹೆಚ್ಚು ಸಕ್ಕರೆ ಹಾಕಿದ, ಕೃತಕ ಹಣ್ಣಿನ ರಸವನ್ನು ಸೇವಿಸಲೇಬಾರದು. ತಾಜಾ ಹಣ್ಣಿನ ರಸವನ್ನು ಸಕ್ಕರೆ ಬೇರಸದೇ ಸೇವಿಸಬೇಕು.
8. ಹಸಿ ತರಕಾರಿಗಳನ್ನು ಹೆಚ್ಚು ಹೆಚ್ಚು ಸೇವಿಸಿ, ಜಾಸ್ತಿ ಮಸಾಲೆಯುಕ್ತ, ಲವಣಯುಕ್ತ ಆಹಾರಗಳನ್ನು ವರ್ಜಿಸಿ ಹಾಲಿನ ಉತ್ಪನ್ನಗಳ ಬಳಕೆಯನ್ನು ಕಡಿಮೆ ಮಾಡಬೇಕು.
9. ಅತಿಯಾದ ಬಾಯಿ ಒಣಗುವಿಕೆ ಉಂಟಾಗಿ, ಬಾಯಾರಿಕೆಯಾದಲ್ಲಿ ಸ್ವಲ್ಪ ಸಕ್ಕರೆ, ಉಪ್ಪು ಸೇರಿಸಿದ ನೀರನ್ನು ಕುಡಿಯಿರಿ. ಮಾರುಕಟ್ಟೆಯಲ್ಲಿ ಸಿಗುವ ಓ. ಆರ್. ಎಸ್ (ORS)ವನ್ನು ಕೂಡಾ ನೀರು ಸೇರಿಸಿ ಸೇವಿಸಬಹುದು.
ಕೊನೆ ಮಾತು :-
ನೀರು ನಮ್ಮ ದೇಹದ ಎಲ್ಲಾ ಮೂಲಭೂತ ಜೈವಿಕ ಕ್ರಿಯೆಗಳಿಗೆ ಅತೀ ಅವಶ್ಯಕ. ನಮ್ಮ ದೇಹದ ಗಾತ್ರ, ತೂಕ, ವಯಸ್ಸು, ಆರೋಗ್ಯ ಮತ್ತು ಹವಾಮಾನಕ್ಕನುಗುಣವಾಗಿ ನಾವು ನಿರಂತರವಾಗಿ ಸುರಕ್ಷಿತವಾದ ನೀರನ್ನು ಸೂಕ್ತ ಪ್ರಮಾಣದಲ್ಲಿ ಅಂದರೆ ದಿನವೊಂದರಲ್ಲಿ 3 ರಿಂದ 4 ಲೀಟರ್‍ಗಳಷ್ಟು ಸೇವಿಸಲೇಬೇಕು ಇಲ್ಲವಾದ್ದಲ್ಲಿ ದೇಹದ ಆಂತರಿಕ ಸಮತೋಲನದಲ್ಲಿ ಏರುಪೇರಾಗಿ ರೋಗ ರುಜಿನಗಳಿಗೆ ಎಡೆ ಮಾಡಿ ಕೊಡಬಹುದು. ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನೈಸರ್ಗಿಕವಾಗಿ ಉಚಿತವಾಗಿ ದೊರಕುವ ಅತೀ ಉತ್ತಮ ಔಷಧಿ ಎಂದರೆ “ನೀರು” ಮಾತ್ರ. ಇಂದಿನ ಕಾಲಘಟ್ಟದಲ್ಲಿ ನಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ನಾವು ದಿನಕ್ಕೊಂದರಂತೆ ಹೊಸ ಹೊಸ ರೋಗಗಳನ್ನು ಸೃಷ್ಟಿಸಿಕೊಂಡು, ಹೊಸ ಹೊಸ ರೋಗಾಣುಗಳನ್ನು ಹುಟ್ಟಿಸಿಕೊಂಡು, ಆಹಾರಕ್ಕಿಂತ ಜಾಸ್ತಿ ಔಷಧಿಯನ್ನು ಸೇವಿಸುವ ಅನಿವಾರ್ಯತೆಗೆ ಸಿಕ್ಕಿ ಹಾಕಿಕೊಂಡಿದ್ದೇವೆ ಎಂದರೂ ತಪ್ಪಲ್ಲ. ಈ ನಿಟ್ಟಿನಲ್ಲಿ ನಾವೆಲ್ಲರೂ ನಮ್ಮ ಜೀವನಶೈಲಿ, ಆಹಾರ ಪದ್ಧತಿಯನ್ನು ಪುನರ್ ವಿಮರ್ಷಿಸಿಕೊಂಡು, ನಮ್ಮ ಜೀವನಶೈಲಿಯನ್ನು ಮತ್ತು ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಕಾಲಕ್ಕೆ ತಕ್ಕಂತೆ ನಮ್ಮ ಅವಶ್ಯಕತೆಗಳು ಬದಲಾಗುವಂತೆ, ದೈಹಿಕ ಆರೋಗ್ಯಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸಿಕೊಂಡು, ದೇಹದ ಆರೋಗ್ಯಕ್ಕೆ ಪೂರಕವಾದ ನೀರು ಆಹಾರವನ್ನು ಸೇವಿಸುವುದಲ್ಲಿಯೇ ಮನುಕುಲದ ಒಳಿತು ಮತ್ತು ಉನ್ನತಿ ಅಡಗಿದೆ.
ಡಾ|| ಮುರಲೀ ಮೋಹನ್ ಚೂಂತಾರು MDS,DNB,MOSRCSEd(U.K), FPFA, M.B.A
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು
ಮೊ : 9845135787 drmuraleechoontharu@gmail.com