ಉಬ್ಬಿದ ರಕ್ತನಾಳ (ವೇರಿಕೋಸ್ ವೇನ್ಸ್) – ಡಾ| ಮುರಲೀ ಮೋಹನ್ ಚೂಂತಾರು

ಉಬ್ಬಿದ ರಕ್ತನಾಳ (ವೇರಿಕೋಸ್ ವೇನ್ಸ್

ಉಬ್ಬಿದ ರಕ್ತನಾಳ ಎನ್ನುವುದು ಸಾಮಾನ್ಯವಾಗಿ ವಯಸ್ಕರಲ್ಲಿ ಕಂಡು ಬರುವ ರಕ್ತನಾಳಗಳಿಗೆ ಸಂಬಂಧಿಸಿದ ಗುಣಪಡಿಸಲಾಗದ ಮತ್ತು ಮಾರಣಾಂತಿಕವಲ್ಲದ ರೋಗವಾಗಿದೆ. ಆಂಗ್ಲ ಭಾಷೆಯಲ್ಲಿ ಇದನ್ನು “ವೇರಿಕೋಸ್ ವೇನ್ಸ್” ಎಂದು ಕರೆಯುತ್ತಾರೆ. ಹೆಚ್ಚಾಗಿ ಕಾಲುಗಳಲ್ಲಿ ಕಾಣಿಸಿಕೊಳ್ಳುವ ಈ ಸಮಸ್ಯೆ ಕೆಲವೊಮ್ಮೆ ತೊಡೆಗಳಲ್ಲಿ ಮತ್ತು ಹೊಟ್ಟೆಯ ಭಾಗದಲ್ಲಿಯೂ ಕಂಡು ಬರುತ್ತದೆ. ಕಾಲುಗಳಲ್ಲಿನ ರಕ್ತನಾಳಗಳು ಉಬ್ಬಕೊಂಡು ದಪ್ಪವಾಗಿ ಹಗ್ಗದಂತೆ ಕಾಣಿಸಿಕೊಂಡು ಕಾಲುಗಳ ಚರ್ಮದಲ್ಲಿ ಅಂಕುಡೊಂಕಾಗಿ ಜೇಡರ ಬಲೆಯಂತೆ ಅಸಹ್ಯಕರವಾಗಿ ಕಾಣಿಸಿಕೊಳ್ಳುತ್ತದೆ. ಆರಂಭಿಕ ಹಂತದಲ್ಲಿ ಯಾವುದೇ ನೋವು, ತುರಿಕೆ ಇಲ್ಲದ ಕಾರಣ ಹೆಚ್ಚನ ಜನರು ಈ ರೋಗವನ್ನು ನಿರ್ಲಕ್ಷಿಸುತ್ತಾರೆ. ಭಾರತ ದೇಶವೊಂದರಂತೆ ಸುಮಾರು 10 ಮಿಲಿಯನ್ ಮಂದಿ ವಾರ್ಷಿಕವಾಗಿ ಈ ರೋಗಕ್ಕೆ ತುತ್ತಾಗುತ್ತಾರೆ. ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸುತ್ತಾದರೂ ಪೂರ್ತಿ ಗುಣ ಪಡಿಸಲು ಸಾಧ್ಯವಿಲ್ಲದ ಈ ರೋಗವನ್ನು ಅತೀ ಸುಲಭವಾಗಿ ವಿಶೇಷ ಪರೀಕ್ಷೆಗಳ ಅಗತ್ಯವಿಲ್ಲದೆ ಕಂಡು ಹಿಡಿಯಲು ಸಾಧ್ಯವಿದೆ. ಬಹಳ ವರ್ಷಗಳಿಂದ ಉಬ್ಬಿದ ರಕ್ತನಾಳಗಳಿದ್ದಲ್ಲಿ ಕೆಲವೊಮ್ಮೆ ಈ ರಕ್ತನಾಳಗಳೊಳಗೆ ರಕ್ತ ಹೆಪ್ಪುಗಟ್ಟಿ ಅತೀ ವಿರಳ ಸಂದರ್ಭಗಳಲ್ಲಿ ಮಾರಣಾಂತಿಕವಾಗುವ ಸಾಧ್ಯತೆ ಇದೆ. ಇಂತಹ ಸಂದರ್ಭಗಳಲ್ಲಿ ಕಾಲುಗಳಲ್ಲಿ ವಿಪರೀತ ನೋವು, ರಕ್ತನಾಳಗಳ ಉರಿಯೂತ ಉಂಟಾಗುತ್ತದೆ. ಉಳಿದ ಎಲ್ಲಾ ಸಂದರ್ಭಗಳಲ್ಲಿ ಉಬ್ಬು ರಕ್ತನಾಳಗಳಲ್ಲಿ ಯಾವುದೇ ನೋವು ಇರುವುದಿಲ್ಲ. ಈ ಕಾರಣದಿಂದಲೇ ಹೆಚ್ಚು ಜನರು ಈ ರೋಗದ ಬಗ್ಗೆ ದಿವ್ಯ ನಿರ್ಲಕ್ಷ ವಹಿಸುತ್ತಾರೆ.

ರೋಗದ ಲಕ್ಷಣಗಳು ಏನು:

1. ಕಾಲುನೋವು, ಕಾಲುಗಳ ಸ್ನಾಯುಗಳ ಸೆಳೆತ ಮತ್ತು ಕಾಲುಗಳು ಭಾರವಾದಂತಾಗುವುದು ಇದು ಸಾಮಾನ್ಯವಾಗಿ ಆರಂಭಿಕ ಹಂತದಲ್ಲಿ ಕಂಡು ಬರುವ ಲಕ್ಷಣಗಳು. ಈ ಎಲ್ಲಾ ಲಕ್ಷಣಗಳು ದಿನದ ಮುಕ್ತಾಯದ ಹಂತ ಅಂದರೆ ಸಂಜೆ ಹೊತ್ತಿಗೆ ಕಾಣಿಸಿಕೊಳ್ಳುತ್ತದೆ. ಆರಂಭದಲ್ಲಿ ಕಾಲಿಗೆ ವಿಶ್ರಾಂತಿ ಮತ್ತು ಕಾಲು ಚಾಚಿ ಕುಳಿತುಕೊಂಡಲ್ಲಿ ಸ್ವಲ್ಪ ನೆಮ್ಮದಿ ದೊರಕಿದÀಂತಾಗುತ್ತದೆ.
2. ಮುಂದುವರಿದ ಹಂತದಲ್ಲಿ ಕಾಲಿನ ಮೇಲ್ಭಾಗದಲ್ಲಿ ಚರ್ಮ ದಪ್ಪಗಾಗುವುದು ಮತ್ತು ಕಪ್ಪಾಗುತ್ತದೆ. ಚರ್ಮದಲ್ಲಿ ವಿಪರೀತ ತುರಿಕೆ ಇರುತ್ತದೆ.
3. ಯಾವುದೇ ಸೂಕ್ತ ಚಿಕಿತ್ಸೆ ಪಡೆಯದೆ ಇದ್ದಲ್ಲಿ ಕೊನೆಯ ಹಂತದಲ್ಲಿ ಕಾಲುಗಳ ಚರ್ಮದಲ್ಲಿ ಗಾಯಗಳಾಗಿ ಮಾಗದ ಹುಣ್ಣುಗಳು ಉಂಟಾಗುತ್ತದೆ. ಕಾಲಿನ ಚರ್ಮ ಪೂರ್ತಿ ಕಪ್ಪಗಾಗುವ ಸಾಧ್ಯತೆ ಇರುತ್ತದೆ. ಕಾಲಿನ ಕೆಳ ಭಾಗದದಿಂದ ಕಲ್ಮಶ ರಕ್ತ ಮತ್ತು ಜೀವ ಕೋಶಗಳ ತ್ಯಾಜ್ಯಗಳು ವಿಲೇವಾರಿಯಾಗದೆ ಈ ತೊಂದರೆ ಮತ್ತಷ್ಟು ಉಲ್ಬಣವಾಗುತ್ತದೆ.

ಪತ್ತೆ ಹಚ್ಚುವುದು ಹೇಗೆ?

ಬಹಳ ಸುಲಭವಾಗಿ ಪತ್ತೆ ಹಚ್ಚಬಹುದಾದ ರೋಗ ಇದಾಗಿದೆ. ಯಾವುದೇ ಅತ್ಯಾಧುನಿಕ ಪರೀಕ್ಷೆ ಅಗತ್ಯವಿರುವುದಿಲ್ಲ. ರೋಗದ ಲಕ್ಷಣಗಳು, ಪರಿಪೂರ್ಣ ದೈಹಿಕ ತಪಾಸಣೆ ಮತ್ತು ವ್ಯಕ್ತಿಯ ಜೀವನ ಶೈಲಿ ಹಾಗೂ ಜೀವನ ಚರಿತ್ರೆಯನ್ನು ಆಧರಿಸಿ ರೋಗ ನಿರ್ಣಯ ಮಾಡಲಾಗುತ್ತದೆ. ಶಸ್ತ್ರಚಿಕಿತ್ಸೆ ಮಾಡುವ ಮೊದಲು ರಕ್ತನಾಳಗಳ ಪರಿಶೀಲನೆಗಾಗಿ ಡಾಪ್ಲರ್ ಆಲ್ಟ್ರಾಸೌಂಡ್ ಎಂಬ ಪರೀಕ್ಷೆ ನಡೆಸಿ ರಕ್ತನಾಳಗಳ ಸಂಕೀರ್ಣತೆಯನ್ನು ತಿಳಿದಿಕೊಳ್ಳಲಾಗುತ್ತದೆ.

Also Read  ಈ 9 ರಾಶಿಯವರಿಗೆ ಮದುವೆ ಯೋಗ, ವ್ಯಾಪಾರ ಅಭಿವೃದ್ಧಿ, ಗಂಡ-ಹೆಂಡತಿಯ ಕಲಹ, ಯಾವುದೇ ಸಮಸ್ಯೆ ಇದ್ದರೂ ಪರಿಹಾರ ಶತಸಿದ್ಧ

ಯಾರಿಗೆ ಉಬ್ಬು ರಕ್ತನಾಳದ ಸಮಸ್ಯೆ ಬರುವುದು ಸಾಧ್ಯತೆ ಹೆಚ್ಚು?

1. ವಯಸ್ಸಾದಂತೆ ಉಬ್ಬು ರಕ್ತನಾಳಗಳ ಸಮಸ್ಯೆ ಬರುವ ಸಾಧ್ಯತೆ ಹೆಚ್ಚಾಗುತ್ತದೆ. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಅತೀವಿರಳ.
2. ಅತಿಯಾದ ಬೊಜು,್ಜ ಹೆಚ್ಚದ ದೇಹದ ತೂಕ ಇರುವವರಲ್ಲಿ ಈ ಸಮಸ್ಯೆ ಹೆಚ್ಚು.
3. ನಿರಂತರವಾಗಿ ನಿಲ್ಲಬೇಕಾದ ಉದ್ಯೋಗಿಗಳಾದ ಕಂಡೆಕ್ಟರ್ ವೃತ್ತಿ, ದಂತ ವೈದ್ಯ ವೃತ್ತಿ ಅಥವಾ ಯಾವುದೇ ನಿಂತುಕೊಂಡು ಕೆಲಸ ಮಾಡುವವರಿಗೆ ಈ ಸಮಸ್ಯೆ ಜಾಸ್ತಿ ಇರುತ್ತದೆ.
4. ಸಾಮಾನ್ಯವಾಗಿ ಗರ್ಭಿಣಿ ಹೆಂಗಸರಲ್ಲಿ ಈ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತದೆ. ಮಗು ಹುಟ್ಟಿದ ಬಳಿಕವೂ ಈ ಸಮಸ್ಯೆ ಕೆಲವರಲ್ಲಿ ಮುಂದುವರಿಯುತ್ತದೆ.
5. ಅನುವಂಶಿಕ ಪರಿಸ್ಥಿತಿಗಳಿಂದ ಮತ್ತು ಕಾರಣಗಳಿಂದ ಉಬ್ಬಿದ ರಕ್ತನಾಳಗಳು ಕಾಣಿಸಿಕೊಳ್ಳಬಹುದು. ಮೇಲೆ ತಿಳಿಸಿದ ಎಲ್ಲಾ ಸಂಧರ್ಭಗಳಲ್ಲಿ ಅತಿಯಾದ ರಕ್ತದ ಒತ್ತಡ ಉಂಟಾದಾಗ ರಕ್ತನಾಳ ಮೇಲೆ ಒತ್ತಡ ಹೆಚ್ಚಾಗಿ ಉಬ್ಬು ರಕ್ತನಾಳಗಳು ಪರೋಕ್ಷವಾಗಿ ಕಾರಣವಾಗುವ ಸಾಧ್ಯತೆ ಇರುತ್ತದೆ.

ತಪ್ಪು ಕಲ್ಪನೆಗಳು:

1. ಉಬ್ಬಿದ ರಕ್ತನಾಳಗಳು ನೋಡಲು ಅಸಹ್ಯ ಆದರೆ ಮಾರಾಣಾಂತಕವಲ್ಲ ಎಂಬುವುದು ತಪ್ಪು ಕಲ್ಪನೆ. ನೂರರಲ್ಲಿ ಒಬ್ಬರಿಗೆ ಮಾರಣಾಂತಿಕವಾಗುವ ಎಲ್ಲಾ ಸಾಧ್ಯತೆ ಇದೆ. ಕಾಲುಗಳಲ್ಲಿ ನೋವು, ಸ್ನಾಯು ಸೆಳೆತ, ಊತ ಉಂಟಾಗಿ ಜೀವನ ಶೈಲಿ ಮತ್ತು ದೈನಂದಿನ ಚಟುವಟಿಕೆಗಳಿಗೆ ಅಡ್ಡಿ ಪಡಿಸಬಹುದು.
2. ಉಬ್ಬಿದ ರಕ್ತನಾಳಗಳಿಗೆ ಚಿಕಿತ್ಸೆ ಅಗತ್ಯವಿಲ್ಲ. ಯಾವುದೇ ನೋವಿಲ್ಲದ ಕಾರಣದಿಂದ ನೋವು ಬರುವಲ್ಲಿಯವರೆಗೆ ನಿರಾತಂಕವಾಗಿರಬಹುದು ಎನ್ನುವುದು ತಪ್ಪು ಕಲ್ಪನೆ. ಆರಂಭದಲ್ಲಿ ನೋವು ಇಲ್ಲದ್ದಿದ್ದರೂ, ಬಳಿಕ ತುರಿಕೆ, ನೋವು, ಚರ್ಮ ದಪ್ಪವಾಗುವುದು, ಮತ್ತು ಹುಣ್ಣಾಗುವ ಸಾಧ್ಯತೆ ಇರುತ್ತದೆ. ಈ ಹಂತ ತಲುಪಿದ ಬಳಿಕ ಚಿಕಿತ್ಸೆ ಕಷ್ಟವಾಗುತ್ತದೆ.
3. ವೇರಿಕೋಸ್ ವೇನ್ಸ್‍ಗಳನ್ನು ತಡೆಗಟ್ಟಲು ಸಾಧ್ಯವಿಲ್ಲ ಎಂಬುವುದು ಕೂಡ ತಪ್ಪು ಕಲ್ಪನೆ. ಜೀವನ ಶೈಲಿ ಮತ್ತು ಆಹಾರ ಪದ್ದತಿ ಬದಲಿಸಿ ವೇರಿಕೋಸ್ ವೇನ್ಸ್ ಬರದಂತೆ ಮಾಡಬಹುದು.
4. ಉಬ್ಬಿದ ರಕ್ತನಾಳಗಳ ಚಿಕಿತ್ಸೆ ಬಹಳ ನೋವುಕಾರಕ ಎನ್ನುವುದು ಕೂಡ ತಪ್ಪು ಕಲ್ಪನೆ ಬಹಳ ಆಧುನಿಕ ಚಿಕಿತ್ಸಾ ಕ್ರಮಗಳಿಂದ ನೋವಿಲ್ಲದೆ ಶಸ್ತ್ರ ಚಿಕಿತ್ಸೆ ಮಾಡಲು ಸಾಧ್ಯವಿದೆ.

ತಡೆಗಟ್ಟುವುದು ಹೇಗೆ?

1. ದೇಹದ ತೂಕದ ನಿಯಂತ್ರಣ ಮಾಡಬೇಕು. ಅತಿಯಾದ ದೇಹದ ತೂಕವಿದ್ದಲ್ಲಿ ಜೀವನ ಶೈಲಿ ಮತ್ತು ಆಹಾರ ಪದ್ದತಿ ಬದಲಿಸಿ ಬೊಜ್ಜು ಕರಗಿಸಬೇಕು.
2. ವ್ಯಾಯಾಮ, ದೈಹಿಕ ಕಸರತ್ತು ಇರುವ ಜೀವನ ಶೈಲಿ ಬಳಸತಕ್ಕದ್ದು, ಕೊಬ್ಬು ಜಾಸ್ತಿ ಇರುವ ಕರಿದ ತಿಂಡಿಗಳನ್ನು ವರ್ಜಿಸಿ ಹಸಿ ತರಕಾರಿ, ಹಣ್ಣು ಹಂಪಲು ಸೇವಿಸಿ ಆರೋಗ್ಯಪೂರ್ಣ ಜೀವನ ಪದ್ದತಿ ಅಳವಡಿಸಿಕೊಳ್ಳಬೇಕು.
3. ರಾತ್ರಿ ಹೊತ್ತು ಮಲಗುವಾಗ ಅಥವಾ ಮದ್ಯಾಹ್ನ ಹೊತ್ತು ವಿಶ್ರಮಿಸುವಾಗ ಕಾಲನ್ನು ಸ್ವಲ್ಪ ಎತ್ತರದಲ್ಲಿ ಇರುವಂತೆ ಮಾಡಿಕೊಳ್ಳಬೇಕು ಈ ರೀತಿ ಮಾಡುವುದರಿಂದ ರಕ್ತದ ಸರಾಗ ಚಲನೆಗೆ ಪೂರಕವಾದ ವಾತಾವರಣ ಕಲ್ಪಸುತ್ತದೆ.
4. ನಿರಂತರವಾಗಿ ನಿಂತುಕೊಂಡು ಕೆಲಸ ಮಾಡುವ ವ್ಯಕ್ತಿಗಳು ಪ್ರತಿ ಗಂಟೆಗೊಮ್ಮೆ ವಿಶ್ರಾಂತಿ ಪಡೆದು ಕಾಲುಗಳಿಗೆ ವಿರಾಮ ನೀಡತಕ್ಕದ್ದು
5. ಉಬ್ಬು ರಕ್ತನಾಳಗಳನ್ನು ತಡೆಯುವ ಸಲುವಾಗಿ ಉದ್ದವಾದ ಕಾಲು ಚೀಲಗಳು ಲಭ್ಯವಿದ್ದು ಇವುಗಳು ರಕ್ತನಾಳಗಳ ಮೇಲೆ ಒತ್ತಡ ಹಾಕಿ ರಕ್ತದ ಸರಾಗ ಪರಿಚಲನೆಗೆ ಅನುವು ಮಾಡಿಕೊಡುತ್ತದೆ.
6. ಗಂಟೆಗಟ್ಟಲೆ ಕುಳಿತುಕೊಂಡು ನಿರಂತರವಾಗಿ ಕೆಲಸಮಾಡಬಾರದು ಪ್ರತೀ ಅರ್ಧ ಗಂಟೆಗೊಮ್ಮೆ ಎದ್ದು ಓಡಾಡಬೇಕು. ನಿರಂತರವಾಗಿ ಕುಳಿತುಕೊಂಡಲ್ಲಿ ರಕ್ತನಾಳಗಳಲ್ಲಿ ರಕ್ತ ಪರಿಚಲನೆ ಕಷ್ಟವಾಗಿ ಉಬ್ಬು ರಕ್ತನಾಳಗಳಿಗೆ ಕಾರಣವಾಗುತ್ತದೆ. ಓಡಾಡಿದಾಗ ಕಾಲುಗಳ ಸ್ನಾಯುಗಳು ಸಂಕುಚಿತಗೊಂಡು ರಕ್ತದ ಪರಿಚಲನೆಗೆ ಸಹಾಯವಾಗುತ್ತದೆ.

Also Read  ಶ್ರೀ ಮಹಾಕಾಲಭೈರವ ಜ್ಯೋತಿಷ್ಯಂ ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ರವರಿಂದ ದಿನ ಭವಿಷ್ಯ ಮಾಹಿತಿ.

ಚಿಕಿತ್ಸೆ ಹೇಗೆ?

ಎರಡು ಕಾರಣಗಳಿಂದ ಈ ಉಬ್ಬು ರಕ್ತನಾಳಗಳಿಗೆ ಚಿಕಿತ್ಸೆ ಅಗತ್ಯವಿದೆ. ಕೆಲವೊಮ್ಮೆ ಸೌಂದರ್ಯದ ಕಾರಣಕ್ಕಾಗಿ ಜನರು ಸರ್ಜರಿ ಮಾಡಿಸಿಕೊಳ್ಳುತ್ತಾರೆ. ಯಾವುದೇ ನೋವು ತುರಿಕೆ ಇಲ್ಲದಿದ್ದರೂ ನೋಡಲು ಅಸಹ್ಯವಾಗಿ ಕಾಣುವ ಕಾರಣದಿಂದ ಚಿಕಿತ್ಸೆ ಮೊರೆ ಹೋಗುತ್ತಾರೆ.
ಇನ್ನು ಕೆಲವರಲ್ಲಿ ತುರಿಕೆ, ನೋವು, ಹುಣ್ಣು, ನಿರಂತರ ಸ್ನಾಯು ಸೆಳೆತ ಇದ್ದಾಗ ಚಿಕಿತ್ಸೆ ಅನಿವಾರ್ಯವಾಗುತ್ತದೆ. ಶಸ್ತ್ರ ಚಿಕಿತ್ಸೆ ಮುಖಾಂತರ ಉಬ್ಬಿದ ರಕ್ತನಾಳಗಳನ್ನು ತೆಗೆಯಲಾಗುತ್ತದೆ. ಒಂದರಿಂದ ಮೂರು ವಾರಗಳ ವಿಶ್ರಾಂತಿ ಅಗತ್ಯವಿರುತ್ತದೆ. ಕೆಲವೊಮ್ಮೆ ರಕ್ತಸ್ರಾವ, ಚರ್ಮ ಕಪ್ಪಗಾಗುವ ಸಾಧ್ಯತೆ ಇರುತ್ತದೆ.
ಶಸ್ತ್ರಚಿಕಿತ್ಸೆ ಹೊರತಾಗಿ ರಕ್ತನಾಳಗಳಲ್ಲಿ ಚುಚ್ಚು ಮದ್ದು ನೀಡಿ ಅವುಗಳು ಕುಗ್ಗಿ ಹೋಗುವಂತೆ ಮಾಡಲಾಗುತ್ತದೆ. ಲೇಸರ್ ಚಿಕಿತ್ಸೆ ನೀಡಿಯೂ ಉಬ್ಬಿದ ರಕ್ತನಾಳವನ್ನು ಗುಣಪಡಿಸಬಹುದಾಗಿದೆ. ಆರಂಭಿಕ ಹಂತದಲ್ಲಿ ತುರಿಕೆ ಇದ್ದಾಗ ಸ್ಟಿರಾಯ್ಡ ಔಷಧಿ ನೀಡಿ ತುರಿಕೆಯನ್ನು ನಿಯಂತ್ರಿಸಬಹುದಾಗಿದೆ. ಒಮ್ಮೆ ಹುಣ್ಣು ಆಗಿ ಗಾಯ ಉಲ್ಬಣವಾದ ಬಳಿಕ ಶಸ್ತ್ರ ಚಿಕಿತ್ಸೆ ಅನಿವಾರ್ಯ. ವ್ಯಕ್ತಿಯ ವೃತ್ತಿ, ವಯಸ್ಸು ದೈಹಿಕ ಪರಿಸ್ಥಿತಿ, ತೂಕ ಮತ್ತು ಮನಸ್ಥಿತಿ ಎಲ್ಲವನ್ನೂ ತಿಳಿದುಕೊಂಡು ಯಾವ ರೀತಿಯ ಚಿಕಿತ್ಸೆ ಎನ್ನುವುದನ್ನು ವೈದ್ಯರೇ ನಿರ್ಧರಿಸುತ್ತಾರೆ. ಶಸ್ತ್ರಚಿಕಿತ್ಸ್ಸೆ ಅತ್ಯಂತ ಪರಿಣಾಮಕಾರಿ ಚಿಕಿತ್ಸೆಯಾಗಿದ್ದು ಶೇಕಡ 95 ರಿಂದ 97 ರಷ್ಟು ಯಶಸ್ಸು ಸಿಗುತ್ತದೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಶಸ್ತ್ರ ಚಿಕಿತ್ಸೆ ಜೊತೆಗೆ ಜೀವನ ಶೈಲಿ ಬದಲಾವಣೆ, ಆಹಾರ ಪದ್ದತಿ ಬದಲಾವಣೆ ಮತ್ತು ಬೊಜ್ಜು ಕರಗಿಸುವಿಕೆ ಅತೀ ಅನಿವಾರ್ಯ ಎಂಬುದನ್ನು ರೋಗಿಗಳು ಮೊದಲು ತಿಳಿದುಕೊಂಡಲ್ಲಿ ಚಿಕಿತ್ಸೆ ಹೆಚ್ಚು ಪರಿಣಾಮಕಾರಿಯಾಗಬಹುದು.
ವೆರಿಕೋಸ್ ವೇನ್ಸ್ ಕ್ಷಯಿಸುವಿಕೆ ಎನ್ನುವುದು ಒಂದು ಹೊಸ ರೀತಿಯ ಶಸ್ತ್ರಚಿಕಿತ್ಸೆ ಕ್ರಮವಾಗಿದೆ. ಆಂಗ್ಲ ಭಾಷೆಯಲ್ಲಿ ಅಬ್ಲೋಷನ್ ಥೆರಫಿ ಎನ್ನುತ್ತಾರೆ ಇದು ಕನಿಷ್ಟ ಆಕ್ರಮಣಶೀಲ, ಆತ್ಯಾಧುನಿಕ ಮತ್ತು ಸಾಮಾನ್ಯ ನಿದ್ರಾಜನಕ ಅರಿವಳಿಕೆ ಔಷಧಿಗಳು ಅಗತ್ಯವಿಲ್ಲದ ಶಸ್ತ್ರ ಚಿಕಿತ್ಸೆ ಕ್ರಮವಾಗಿದೆ. ಸ್ಥಳಿಯ ಅರಿವಳಿಕೆ ಸಹಾಯದಿಂದ ರೋಗಿಯನ್ನು ಮೂರ್ಚೆ ತಪ್ಪಿಸದೆ ಈ ಚಿಕಿತ್ಸೆ ನೀಡಲಾಗುತ್ತದೆ ನುರಿತ ವೈದ್ಯರು ತೆಳುವಾದ ಕೊಳವೆಯನ್ನು (ಕ್ಯಾಥೆಟರ್) ರಕ್ತನಾಳದಲ್ಲಿ ಅಳವಡಿಸಿ ಲೇಸರ್‍ಗಳ ಬೆಳಕಿನ ಕಿರಣಗಳ ಸಹಾಯದಿಂದ ಉಬ್ಬಿಹೋದ ರಕ್ತನಾಳಗಳ ಅಸಮರ್ಥ ಕವಾಟಗಳನ್ನು ಮುಚ್ಚಿ ಬಿಡುತ್ತಾರೆ. ಹೀಗೆ ಮಾಡಿದಾಗ ರಕ್ತನಾಳಗಳಲ್ಲಿ ಹೆಚ್ಚು ರಕ್ತ ಶೇಖರಣೆ ಆಗುವುದು ತಪ್ಪಿ ಹೋಗಿ ಉಬ್ಬಿದ ರಕ್ತನಾಳಗಳು ಕುಗ್ಗುತ್ತದೆ. ರೋಗ ಪೀಡಿತ ರಕ್ತನಾಳಗಳ ಕ್ಷಯಿಸುವಿಕೆಯಿಂದ ಆರೋಗ್ಯ ಪೂರ್ಣ ರಕ್ತನಾಳಗಳ ಮೇಲೆ ತಗಲುವ ಭಾರ ಅಥವಾ ಒತ್ತಡ ಕಡಿಮೆಯಾಗಿ ಅವುಗಳು ಸರಿಯಾಗಿ ಕೆಲಸ ಮಾಡಲು ಆರಂಭಿಸುತ್ತದೆ. ಈ ಚಿಕಿತ್ಸೆಯು ಶೇಕಡ 95 ರಷ್ಟು ಯಶಸ್ಸು ಸಿಗುವ ಸಾಧ್ಯತೆ ಇರುತ್ತದೆ.

Also Read  ದ್ವಾದಶ ರಾಶಿಗಳ ಫಲಾಫಲಗಳನ್ನು ತಿಳಿಯೋಣ - ಗಿರಿಧರ ಭಟ್

ಕೊನೆ ಮಾತು

ವೇರಿಕೋಸ್ ವೇನ್ಸ್ ಎನ್ನುವುದು ಜೀವನ ಶೈಲಿ ಸಂಬಂಧಿತ ರೋಗವಾಗಿದ್ದು ವಯಸ್ಕ ಮಹಿಳೆಯರಲ್ಲಿ ಕಂಡು ಬರುತ್ತದೆ. ಜೀವನ ಶೈಲಿ ಬದಲಾವಣೆ ಮತ್ತು ಬೊಜ್ಜು ನಿಯಂತ್ರಣದಿಂದ ಪರಿಣಾಮಕಾರಿಯಾಗಿ ಈ ರೋಗ ಬರದಂತೆ ತಡೆಯಲು ಸಾಧ್ಯವಿದೆ. ಜನಸಂಖ್ಯೆ 30 ಶೇಕಡಾ ಮಂದಿ ಈ ರೋಗದಿಂದ ಬಳಲುತ್ತಿದ್ದು ಹೆಚ್ಚಿನವರು ದಿವ್ಯ ನಿರ್ಲಕ್ಷವಹಿಸುತ್ತಿರುವುದು ಕಂಡು ಬರುತ್ತದೆ. ಆರಂಭಿಕ ಹಂತದಲ್ಲಿ ಗುರುತಿಸಿದ್ದಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡಬಹುದು. ಮುಂದುವರಿದ ಹಂತದಲ್ಲಿ ಶಸ್ತ್ರಚಿಕಿತ್ಸೆ ಅನಿವಾರ್ಯವಾಗುತ್ತದೆ. ಚರಕ ಸುಶ್ರುಂಕರ ಕಾಲದಿಂದಲೂ ಈ ಪ್ರಾಚೀನ ರೋಗವನ್ನು ಆಧುನಿಕ ಶಸ್ತ್ರಚಿಕಿತ್ಸಾ ಪದ್ದತಿಯ ಮುಖಾಂತರ ಸರಿಪಡಿಸಲು ಸಾಧ್ಯವಿದೆ ಎನ್ನುವುದು ಸಮಾಧಾನಕರ ಅಂಶವಾಗಿದೆ.

ಡಾ ಮುರಲಿ ಮೋಹನ್ ಚೂಂತಾರು
BDS MDS DNB MBA MOSRCSEd
ಬಾಯಿ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರು
www.surakshadental.com

error: Content is protected !!
Scroll to Top