ಕಡಬ ಭಾಗದಲ್ಲಿ ಕಾಣಿಸಿಕೊಂಡ ಶಂಕಿತ ನಕ್ಸಲರು – ಬಿಳಿನೆಲೆಯ ಮನೆಯೊಂದಕ್ಕೆ ಭೇಟಿ ನೀಡಿದ ಶಂಕೆ – ಪೊಲೀಸ್ ಅಧಿಕಾರಿಗಳ ಭೇಟಿ

ಕಡಬ, ಎ.06. ಠಾಣಾ ವ್ಯಾಪ್ತಿಯ ಬಿಳಿನೆಲೆ ಗ್ರಾಮದ ಚೇರು ಎಂಬಲ್ಲಿನ ಮನೆಯೊಂದಕ್ಕೆ ಶಂಕಿತ ನಕ್ಸಲರ ತಂಡವೊಂದು ಗುರುವಾರ ರಾತ್ರಿ ಆಗಮಿಸಿ ಊಟ, ಮಾಡಿ ದಿನಸಿ ಸಾಮಗ್ರಿಗಳನ್ನು ಪಡೆದು ತೆರಳಿರುವ ಸುದ್ದಿ ಶನಿವಾರ ಬೆಳಗ್ಗಿನಿಂದ ಹರಿದಾಡುತ್ತಿದೆ.

ಗುರುವಾರ ಸಂಜೆ ಏಳು ಗಂಟೆಯ ವೇಳೆಗೆ ತಂಡವೊಂದು ಸ್ಥಳೀಯ ನಿವಾಸಿ ಮನೆಗೆ ಆಗಮಿಸಿ ಊಟ ಮಾಡಿ ಸುಮಾರು ಒಂಭತ್ತು ಗಂಟೆಯ ವೇಳೆಗೆ ದಿನಸಿ ಸಾಮಾಗ್ರಿಗಳನ್ನು ಪಡೆದು ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ತಂಡದಲ್ಲಿ ನಾಲ್ಕರಿಂದ ಆರು ಮಂದಿ ಇದ್ದು ಅವರಲ್ಲಿ ಶಸಾಸ್ತ್ರ ಹಿಡಿದುಕೊಂಡಿದ್ದರು ಎನ್ನಲಾಗಿದೆ. ಮನೆಯಲ್ಲಿದ್ದ ವೇಳೆ ಮನೆಯವರ ಜತೆ ಮಾತನಾಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಶಂಕಿತರು ಮನೆಗೆ ಆಗಮಿಸಿರುವ ಮಾಹಿತಿ ಇಲಾಖೆಗೆ ಲಭ್ಯವಾಗುತ್ತಲೇ ನಕ್ಸಲ್‌ ನಿಗ್ರಹ ಪಡೆ ಹಾಗೂ ಪೊಲೀಸರು ಆಗಮಿಸಿದ್ದಾರೆ. ಎಎನ್‌ಎಫ್‌ ತಂಡ ಮನೆಗೆ ಭೇಟಿ ನೀಡಲಾದ ಆಸು-ಪಾಸು ಪರಿಸರದಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಶಂಕಿತರು ಅದೇ ಪರಿಸರಕ್ಕೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದತ್ತ ತೆರಳಿರುವ ಶಂಕೆ ವ್ಯಕ್ತವಾಗಿದ್ದು, ಕೂಂಬಿಂಗ್ ಆರಂಭಿಸಲಾಗಿದೆ. ಸುಮಾರು 10 ವರ್ಷಗಳ ಹಿಂದೆ ಚೇರು, ಮಣಿಬಾಂಢ ಪ್ರದೇಶಗಳಲ್ಲಿ ನಕ್ಸಲರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎಎನ್ಎಫ್ ತಂಡದಿಂದ ಕೂಂಬಿಂಗ್ ನಡೆಸಿ ಓರ್ವ ಶಂಕಿತ ನಕ್ಸಲ್ ಮೃತಪಟ್ಟಿದ್ದರು.

Also Read  ಹಳೆಯ ವಾಹನ ಗುಜರಿಗೆ ಹಾಕುವ ಮುನ್ನ ಅನುಮತಿ, ಆರ್.ಸಿ ರದ್ದು ಕಡ್ಡಾಯ..!

error: Content is protected !!
Scroll to Top