7 ಮಂದಿ ಮೀನುಗಾರರ ಅಪಹರಿಸಿ ಲಕ್ಷಾಂತರ ರೂ. ಮೌಲ್ಯದ ಮೀನು, ಡೀಸೆಲ್ ದೋಚಿದ ಅಪರಿಚಿತರು

(ನ್ಯೂಸ್ ಕಡಬ) newskadaba.com ಉಡುಪಿ, ಫೆ. 29. ಮೀನುಗಾರಿಕೆಯಿಂದ ವಾಪಾಸ್ಸಾಗುತ್ತಿದ್ದ 7 ಮಂದಿ ಮೀನುಗಾರರನ್ನು ಬಂಧಿಸಿ ಬೋಟ್ ನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಮೀನು ಹಾಗೂ ಡೀಸೆಲ್ ಅನ್ನು ಅಪರಿಚಿತರು ದೋಚಿರುವುದಾಗಿ ಮಲ್ಪೆ ಕೊಡವೂರು ಗ್ರಾಮ ನಿವಾಸಿ ಚೇತನ್‌ ಸಾಲಿಯಾನ್‌ ಅವರು ನೀಡಿದ ದೂರಿನಂತೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ, ಫೆಬ್ರವರಿ 19ರಂದು ಕೃಷ್ಣನಂದನ ಎಂಬ ಲೈಲಾನ್‌ ಬೋಟ್‌ ನಲ್ಲಿ ನಾಗರಾಜ್‌ ಹರಿಕಾಂತ, ನಾಗರಾಜ್‌ ಹೆಚ್.‌ ಹರಿಕಾಂತ, ಅರುಣ್‌ ಹರಿಕಾಂತ, ಅಶೋಕ ಕುಮುಟ, ಕಾರ್ತಿಕ್‌ ಹರಿಕಾಂತ ಮಂಕಿ, ಚಂದ್ರಕಾಂತ ಹರಿಕಾಂತ ಉಪ್ಪುಂದ ಹಾಗೂ ಸುಬ್ರಮಣ್ಯ ಖಾರ್ವಿ ಅವರು ಆಳ ಸಮುದ್ರಕ್ಕೆ ಮೀನು ಹಿಡಿಯಲು ತೆರಳಿದ್ದಾರೆ. ಫೆ. 27ರಂದು ಬೆಳಗ್ಗೆ ನಾಗರಾಜ್‌ ಹರಿಕಾಂತ ಎಂಬ ಮೀನುಗಾರ ಫೋನ್ ಕರೆ ಮಾಡಿ, ಫೆ. 26 ಅಥವಾ 27ರ ರಾತ್ರಿ ಮೀನುಗಾರಿಕೆ ಮುಗಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಮೀನು ತುಂಬಿಸಿಕೊಂಡು ಮಲ್ಪೆ ಕಡೆಗೆ ಬರುತ್ತಿದ್ದೆವು. ಆಗ ನಮ್ಮ ಮೀನಿನ ಬಲೆ ಬೋಟ್ ನ ಫ್ಯಾನ್‌ ಗೆ ಬಿದ್ದ ಕಾರಣ ಬೋಟ್‌ ಬಂದ್‌ ಆಗಿ ನಿಂತಿದೆ. ಈ ಸಂದರ್ಭ ಸುಮಾರು 25 ಜನ ಅಪಹರಣಕಾರರು ಏಕಾಏಕಿ ದಾಳಿ ಮಾಡಿ ಬೋಟ್ ಅನ್ನು ತೀರಕ್ಕೆ ಎಳೆದುಕೊಂಡು ಹೋಗಿ, ನಮ್ಮನ್ನು ಅಪಹರಿಸಿ ಬೋಟ್‌ ನಲ್ಲಿದ್ದ ಸುಮಾರು 8 ಲಕ್ಷ ರೂ. ಮೌಲ್ಯದ ಮೀನು ಹಾಗೂ ಬೋಟ್‌ ಗೆ ತುಂಬಿಸಿದ 5,76,700/- ಮೌಲ್ಯದ 7,500 ಲೀಟರ್‌ ಡೀಸೆಲ್‌ ದೋಚಿದ್ದಾರೆ. ಮೀನುಗಾರರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ದೂರುದಾರರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟು ಮಾಡಿ, ಮೀನುಗಾರರನ್ನು ಅಪರಿಚಿತ ಅಪಹರಣಕಾರರು ಬಂಧನದಲ್ಲಿರಿಸಿ ಅವರಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂಬ ದೂರಿನ ಅನುಸಾರ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಕಲಂ 395, 365, 342 ಜೊತೆಗೆ ಐಪಿಸಿ ಸೆಕ್ಷನ್ 149ರ ಅಡಿ ಪ್ರಕರಣ ದಾಖಲಾಗಿದೆ.

Also Read  ಪುತ್ತೂರು: ಚೂರಿ ಇರಿತ ಆರೋಪ; ವಿದ್ಯಾರ್ಥಿನಿಯನ್ನು ವಜಾಗೊಳಿಸುವಂತೆ ವಿದ್ಯಾರ್ಥಿ ಸಂಘಟನೆ ಆಗ್ರಹ

error: Content is protected !!
Scroll to Top