(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.12. ವ್ಯಾಪಾರಿಗಳು, ಗ್ರಾಹಕರಲ್ಲಿ ತೀವ್ರ ಗೊಂದಲ ಸೃಷ್ಟಿಸಿ ನಿರಾಕರಣೆಗೆ ಕಾರಣವಾಗುತ್ತಿರುವ ಹತ್ತು ರೂ. ನಾಣ್ಯಗಳು ಚಾಲ್ತಿಯಲ್ಲಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಸಾರ್ವಜನಿಕರ ಮೊಬೈಲ್ ಫೋನ್ ಗಳಿಗೆ ಸಂದೇಶ ಕಳುಹಿಸಿ ಗೊಂದಲ ನಿವಾರಿಸುವ ಅಭಿಯಾನ ಕೈಗೊಂಡಿದೆ.
10 ರೂಪಾಯಿ ನಾಣ್ಯವು ರೂಪಾಯಿ ಚಿಹ್ನೆ ಸಹಿತ ಮತ್ತು ರಹಿತವಾಗಿ ಚಲಾವಣೆಯಲ್ಲಿವೆ. ಭಯ ಪಡದೆ ಅವುಗಳನ್ನು ಸ್ವೀಕರಿಸಿ. ಹೆಚ್ಚಿನ ಮಾಹಿತಿಗಾಗಿ 14440ಗೆ ಮಿಸ್ಡ್ ಕಾಲ್ ಕೊಡಿ ಎಂದು ಆರ್ಬಿಐನಿಂದ ಮೊಬೈಲ್ ಫೋನ್ ಗಳಿಗೆ ಕಳೆದ ಕೆಲವು ದಿನಗಳಿಂದ ಕನ್ನಡ, ಇಂಗ್ಲೀಷ್ ಹಾಗೂ ಹಿಂದಿ ಭಾಷೆಯ ಮೂಲಕ ಎಸ್ಎಂಎಸ್ ಬರುತ್ತಿವೆ. ಸಾಮಾಜಿಕ ಜಾಲತಾಣಗಳ ಮೂಲಕ 10ರ ನಾಣ್ಯಗಳು ಚಾಲ್ತಿಯಲ್ಲಿವೆ ಎಂದು ಆರ್ಬಿಐ ಸ್ಪಷ್ಟನೆ ನೀಡಿದ್ದರೂ ಸಾರ್ವಜನಿಕರು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿ, ಬಹುತೇಕರು ಬಳಕೆ ಮಾಡುವ ಮೊಬೈಲ್ ಫೋನ್ ಗಳಿಗೆ ಎಸ್ಎಂಎಸ್ ಕಳುಹಿಸುವ ಮೂಲಕ ಗೊಂದಲಕ್ಕೆ ಒಳಗಾಗಬೇಡಿ ಎಂದು ಆರ್ಬಿಐ ಸ್ಪಷ್ಟನೆ ನೀಡುತ್ತಿದೆ.