(ನ್ಯೂಸ್ ಕಡಬ) newskadaba.com ಕಡಬ, ಫೆ.15. ರಾಜ್ಯದ ಜನರಿಗೆ ಚುನಾವಣೋತ್ತರದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ ಗ್ಯಾರಂಟಿಗಳನ್ನು ಅಧಿಕಾರ ವಹಿಸಿಕೊಂಡ ಬಳಿಕ ಚಾಚೂ ತಪ್ಪದೆ ಅನುಷ್ಠಾನಿಸಿ ಜನರ ಮನಗೆದ್ದಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿದ ಸಾಧನೆಯನ್ನು ಜನರ ಮುಂದೆ ಪ್ರಸ್ತುತಪಡಿಸಲು ಫೆಬ್ರವರಿ 17ರಂದು ಮಂಗಳೂರಿನಲ್ಲಿ ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಂಡಿದ್ದು, ಕಾರ್ಯಕ್ರಮವನ್ನು ಹಬ್ಬದ ರೀತಿಯಲ್ಲಿ ಪರಿವರ್ತಿಸಲು ಜನರು ಪಾಲ್ಗೊಳ್ಳಬೇಕು ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಸುರಾಜ್ ಹೆಗ್ಡೆ ಹೇಳಿದರು.
ಅವರು ಕಡಬದಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸರ್ಕಾರದ ಸಚಿವರುಗಳು ಭಾಗವಹಿಸಲಿದ್ದಾರೆ. ಮುಖ್ಯವಾಗಿ ದ.ಕ. ಹಾಗೂ ಉಡುಪಿ ಜಿಲ್ಲೆಯಿಂದ ಹೆಚ್ಚಿನ ಜನರು ಭಾಗವಹಿಸುವಂತೆ ಕಾರ್ಯಯೋಜನೆ ಹಾಕಿಕೊಳ್ಳಲಾಗಿದೆ. ಇತರ ಜಿಲ್ಲೆಗಳಿಂದಲೂ ಸಾಕಷ್ಟು ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದರು. ಉಸ್ತುವಾರಿ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಸುಳ್ಯ ವಿಧಾನಸಭಾ ಕ್ಷೇತ್ರದಿಂದ 4 ಸಾವಿರ ಮಂದಿ ಭಾಗವಹಿಸಲು ಸಿದ್ದತೆ ನಡೆಸಲಾಗಿದೆ. ಕಾರ್ಯಕ್ರಮದ ಯಶಸ್ವಿಗಾಗಿ ಗ್ರಾಮ ಮಟ್ಟದಿಂದಲೇ ಪಕ್ಷದ ಮುಖಂಡರಿಗೆ ವಿವಿಧ ಜವಾಬ್ದಾರಿಗಳನ್ನು ನೀಡಲಾಗಿದೆ. ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸೂಚಿಸಲಾಗಿದೆ. ಎಲ್ಲರ ಒಗ್ಗಟ್ಟಿನಿಂದ ಯಶಸ್ವಿ ಕಾರ್ಯಕ್ರಮ ಆಗಲಿದೆ ಎಂದರು. ಉಸ್ತುವಾರಿ ಮಮತಾ ಗಟ್ಟಿ ಮಾತನಾಡಿ, ಮಂಗಳೂರಿನಲ್ಲಿ ನಡೆಯಲಿರುವ ಸಮಾವೇಶ ಮುಂದಿನ ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಸಮಾವೇಶದಲ್ಲಿ ನಾಯಕರು ನೀಡುವ ಸೂಚನೆಯನ್ನು ಎಲ್ಲರೂ ಪಾಲಿಸಬೇಕು. ಮುಂಬರುವ ಎಲ್ಲಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಪಡೆಯುವ ನಿಟ್ಟಿನಲ್ಲಿ ಹೆಚ್ಚಿನ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಶೆಟ್ಟಿ, ಮುಖಂಡರಾದ ಕೃಷ್ಣಪ್ಪ ಜಿ, ಪಿ.ಪಿ. ವರ್ಗಿಸ್, ವಿಜಯ ಕುಮಾರ್ ರೈ, ಸಿ.ಜೆ. ಸೈಮನ್, ಆದಂ ರಾಮಕುಂಜ, ಆಶಾ ಲಕ್ಷ್ಮಣ ಗುಂಡ್ಯ, ಶೀನಪ್ಪ ಗೌಡ ಬೈತಡ್ಕ, ಶಾರದಾ ದಿನೇಶ್, ಸರ್ವೋತ್ತಮ ಗೌಡ, ಉಷಾ ಅಂಚನ್, ಅಶೋಕ್ ನೆಕ್ರಾಜೆ, ಸತೀಶ್ ನಾಯಕ್ ಮೊದಲಾದವರಿದ್ದರು.