(ನ್ಯೂಸ್ ಕಡಬ) newskadaba.com ಕಡಬ, ಜ.31. ಡೆಂಗ್ಯೂ ಮತ್ತು ಮಲೇರಿಯಾ ಜ್ವರ ವಿಪರೀತವಾದ ಹಿನ್ನೆಲೆಯಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮದ ವಿಮಲಗಿರಿ ಎಂಬಲ್ಲಿ ನಡೆದಿದೆ.
ವಿಮಲಗಿರಿ ಕಲ್ಲೋಲಿಕ್ಕಲ್ ನಿವಾಸಿ ಶಿಜು ಕಲ್ಲೋಳಿಕಲ್ (31) ಎಂಬವರು ಮೃತಪಟ್ಟವರು. ಭಾನುವಾರದಂದು ಜ್ವರ ಕಂಡುಬಂದ ಹಿನ್ನೆಲೆಯಲ್ಲಿ ಕಡಬದ ಕ್ಲಿನಿಕ್ ಗೆ ಅವರು ಚಿಕಿತ್ಸೆಗಾಗಿ ಆಗಮಿಸಿದ್ದರು. ಅಲ್ಲಿ ಪರೀಕ್ಷೆ ನಡೆಸಿದಾಗ ಡೆಂಗ್ಯೂ ಜ್ವರ ಪತ್ತೆಯಾಗಿದೆ. ನಂತರದಲ್ಲಿ ಮನೆಗೆ ಬಂದ ಶಿಜು ಅವರಿಗೆ ಜ್ವರ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಮತ್ತೆ ಮಾರನೇ ದಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕಳುಹಿಸಿಕೊಡಲಾಗಿದ್ದು, ಆದರೆ ಮಂಗಳೂರಿನ ಆಸ್ಪತ್ರೆಗೆ ತಲುಪಿದ ವೇಳೆಗಾಗಲೇ ಶಿಜು ಅವರು ಮೃತಪಟ್ಟಿದ್ದರು. ಶಿಜು ಅವರು ಮಲಂಕರ ಕ್ಯಾಥೋಲಿಕ್ ಚರ್ಚ್ ಪುತ್ತೂರು ಧರ್ಮಪ್ರಾಂತ್ಯದ ರೆ.ಫಾ. ಥಾಮಸ್ ಕಲ್ಲೋಳಿಕಲ್ ಅವರ ಸಹೋದರರಾಗಿದ್ದಾರೆ. ಶಿಜು ಅವರು ಅಜ್ಜಿ, ತಾಯಿ ಸಾಲಿ, ಪತ್ನಿ ಧನ್ಯ, ಸಹೋದರಿ ಸ್ವಪ್ನ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ. ಮೃತ ಶಿಜು ಅವರ ಅಂತ್ಯ ಸಂಸ್ಕಾರ ಕಾರ್ಯಗಳು ವಿಮಲಗಿರಿ ಸಂತ ಮೇರಿಸ್ ಮಲಂಕರ ಕ್ಯಾಥೊಲಿಕ್ ಚರ್ಚಿನಲ್ಲಿ ನೆರವೇರಿತು. ವಿವಿಧ ಚರ್ಚುಗಳ ಧರ್ಮಗುರುಗಳು, ಧರ್ಮಭಗಿನಿಯರು, ಧಾರ್ಮಿಕ, ರಾಜಕೀಯ, ಸಾಮಾಜಿಕ ಮುಖಂಡರು, ವಿವಿಧ ಸಂಘಟನೆಗಳ ಪ್ರಮುಖರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.