ಗ್ಯಾರಂಟಿ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಉಸ್ತುವಾರಿ ಕಾರ್ಯದರ್ಶಿ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 17. ರಾಜ್ಯ ಸರಕಾರವು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುವಂತೆ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ. ಅತೀಕ್ ಸೂಚಿಸಿದ್ದಾರೆ. ಅವರು ಸೋಮವಾರದಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಗೃಹಲಕ್ಷ್ಮೀ ಯೋಜನೆಯಲ್ಲಿ ಜಿಲ್ಲೆಯಲ್ಲಿ ಅಗಸ್ಟ್ ವರೆಗೆ 315726 ಹಾಗೂ ಸೆಪ್ಟೆಂಬರ್ ವರೆಗೆ 3.20 ಲಕ್ಷ ಫಲಾನುಭವಿಗಳಿದ್ದಾರೆ. ಅಕ್ಟೋಬರ್ 15 ರ ತನಕ 3.44 ಲಕ್ಷ ಫಲಾನುಭವಿಗಳು ದಾಖಲಾಗಿದ್ದಾರೆ. ಬ್ಯಾಂಕ್ ಖಾತೆಯ ಸಮಸ್ಯೆಗಳಿಂದ 33419 ಮಂದಿಗೆ ಮೊತ್ತ ಜಮೆ ಅಗಿಲ್ಲ. ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ, ಫಲಾನುಭವಿಗಳಿಗೆ ರೂ. 2000 ಮೊತ್ತ ಜಮೆ ಆಗಬೇಕು ಎಂದು ಅವರು ತಿಳಿಸಿದರು. ಗೃಹಜ್ಯೋತಿ ಯೋಜನೆಯಲ್ಲಿ ದ.ಕ. ಜಿಲ್ಲೆಯಲ್ಲಿ ಶೇ. 94 ರಷ್ಟು ಗೃಹ ವಿದ್ಯುತ್ ಬಳಕೆದಾರರು ನೋಂದಾಯಿಸಿದ್ದಾರೆ. ಅರ್ಹ ಬಳಕೆದಾರರಿಗೆ ಶೂನ್ಯ ಬಿಲ್ ಕಳುಹಿಸಲಾಗಿದೆ. ಇದಕ್ಕಾಗಿ ರಾಜ್ಯ ಸರಕಾರದಿಂದ ರೂ. 224 ಕೋಟಿ ಮೊತ್ತ ಮೆಸ್ಕಾಂಗೆ ಬಂದಿದೆ ಎಂದು ಮೆಸ್ಕಾಂ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

Also Read  ಅನ್ನಪೂರ್ಣೇಶ್ವರಿ ಅಮ್ಮನವರ ನೆನೆದು ತಿಳಿಯೋಣ ನಿತ್ಯ ಭವಿಷ್ಯ

ಆರೋಗ್ಯ ಇಲಾಖೆಯು ಗರ್ಭಿಣಿ ಮಹಿಳೆಯರನ್ನು ಗುರುತಿಸಿ, ಸೂಕ್ತ ಆರೋಗ್ಯ ನೆರವು ನೀಡಬೇಕು. ಗರ್ಭಿಣಿಯರಲ್ಲಿ ರಕ್ತದ ಕೊರತೆ ಸಮಸ್ಯೆ ಪ್ರಮುಖವಾಗಿದ್ದು, ಕಬ್ಬಿಣಾಂಶಗಳ ಮಾತ್ರೆ ಸಕಾಲದಲ್ಲಿ ಒದಗಿಸಲು ಆದ್ಯತೆ ನೀಡುವಂತೆ ಉಸ್ತುವಾರಿ ಕಾರ್ಯದರ್ಶಿಗಳು ಆರೋಗ್ಯ ಇಲಾಖೆಗೆ ಸೂಚಿಸಿದರು. ದ.ಕ. ಜಿಲ್ಲೆಯ ಸರಕಾರಿ ಅಸ್ಪತ್ರೆಗಳಲ್ಲಿ 60 ಡಯಾಲಿಸಿಸ್ ಯಂತ್ರಗಳಿವೆ. ಮೂಲ್ಕಿ, ಮೂಡಬಿದ್ರೆ, ಕಡಬ ಆಸ್ಪತ್ರೆಗಳಲ್ಲಿ ತಲಾ 3 ಡಯಾಲಿಸಿಸ್ ಯಂತ್ರಗಳಿದ್ದರೂ, ಸೂಕ್ತ ಸಿಬ್ಬಂದಿಗಳಿಲ್ಲದೆ ಕಾರ್ಯಾಚರಿಸುತ್ತಿಲ್ಲ. ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಪ್ರತೀ ತಿಂಗಳು ರೂ. 24 ಲಕ್ಷ ಮೊತ್ತವನ್ನು ಜಿಲ್ಲೆಯಲ್ಲಿ ಹಾಸ್ಟೆಲ್ ಕಟ್ಟಡಗಳ ಬಾಡಿಗೆಗೆ ಪಾವತಿಸಲಾಗುತ್ತಿದೆ. ಈ ಹಾಸ್ಟೆಲ್ ಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಆದ್ಯತೆ ನೀಡಬೇಕು ಎಂದು ಎಲ್.ಕೆ. ಅತೀಕ್ ಸೂಚಿಸಿದರು. ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ಪ್ರಗತಿ ಮಾಹಿತಿ ನೀಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ್ ಕೆ., ಪೊಲೀಸ್ ವರಿಷ್ಠಾಧಿಕಾರಿ ರಿಶ್ಯಂತ್, ಮಹಾನಗರಪಾಲಿಕೆ ಆಯುಕ್ತ ಆನಂದ್ ಮತ್ತಿತರರು ಇದ್ದರು. ಇದಕ್ಕೂ ಮೊದಲು ಜಿಲ್ಲಾ ಉಸ್ತವಾರಿ ಕಾರ್ಯದರ್ಶಿಗಳು ನಗರದಲ್ಲಿ ಇರುವ ವಿವಿಧ ಸರ್ಕಾರಿ ಹಾಸ್ಟೇಲ್‍ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Also Read  ಕಡಬ: ಯುವಕ ನಾಪತ್ತೆ ➤ ಅಪಹರಣ ಶಂಕೆ ವ್ಯಕ್ತಪಡಿಸಿದ ಪೋಷಕರು

error: Content is protected !!
Scroll to Top