(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 22. ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಸಚಿವ ಮಧು ಬಂಗಾರಪ್ಪ ಅವರಿಗೆ ಉಸ್ತುವಾರಿ ಹೊಣೆ ವಹಿಸಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ಆದೇಶದಲ್ಲಿ ‘ತಮ್ಮನ್ನು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವೀಕ್ಷಕರನ್ನಾಗಿ ನೇಮಿಸಲಾಗಿದೆ. ತಾವು ಆ ಕ್ಷೇತ್ರಕ್ಕೆ ಭೇಟಿ ನೀಡಿ ಉಸ್ತುವಾರಿ ಸಚಿವರ ಸಹಕಾರದೊಂದಿಗೆ ವಿಧಾನಸಭಾ ಕ್ಷೇತ್ರವಾರು ಮುಖಂಡರ ಕಾರ್ಯಕರ್ತರ ಸಭೆ ನಡೆಸಿ, ಜಿಲ್ಲೆಯ ಹಿರಿಯ ಮುಖಂಡರ, ಶಾಸಕರ, ಮಾಜಿ ಸಂಸದರ, ಮಾಜಿ ಶಾಸಕರ, ಡಿಸಿಸಿ-ಬಿಸಿಸಿ ಅಧ್ಯಕ್ಷರ, ಸ್ಥಳೀಯ ಸಂಸ್ಥೆಗಳ, ಜನಪ್ರತಿನಿಧಿಗಳ ಹಾಗೂ ಪ್ರಮುಖ ಸಂಘ-ಸಂಸ್ಥೆಗಳ, ಶಿಕ್ಷಣ ಸಂಸ್ಥೆಗಳ, ಕೈಗಾರಿಕೋದ್ಯಮಿಗಳ ಹೀಗೆ ಹಲವು ಪ್ರಮುಖರ ಅಭಿಪ್ರಾಯ ಸಂಗ್ರಹಿಸಿ ಸಂಭಾವ್ಯ ಅಭ್ಯರ್ಥಿ ಯಾರಾಗಬಹುದು ಎಂಬುದರ ಬಗ್ಗೆ 15 ದಿನದೊಳಗೆ ಖುದ್ದು ತನಗೆ ಗೌಪ್ಯ ವರದಿ ಸಲ್ಲಿಸುವಂತೆ ತಿಳಿಸಲಾಗಿದೆ.