(ನ್ಯೂಸ್ ಕಡಬ) newskadaba.com ಸುಳ್ಯ, ಫೆ.08. ಕಳೆದ 25 ವರ್ಷಗಳಿಂದ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರುತ್ತಿರುವ ಎಸ್. ಅಂಗಾರರವರನ್ನು ಸೋಲಿಸಿ ಬಿಜೆಪಿಯ ಭದ್ರ ಕೋಟೆಯನ್ನು ಛಿದ್ರಗೊಳಿಸುವ ಪ್ರಯತ್ನದಲ್ಲಿರುವ ಕಾಂಗ್ರೆಸ್, ಜಾನಪದ ವಿದ್ವಾಂಸ ದಯಾನಂದ ಕತ್ತಲ್ಸರ್ ಅವರಿಗೆ ಗಾಳ ಹಾಕಿದ್ದು, ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ.
ಸುಳ್ಯ ವಿಧಾನಸಭಾ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಕತ್ತಲ್ಸರ್ ಅವರಿಗೆ ಕಾಂಗ್ರೆಸ್ ಸುಳ್ಯ ಘಟಕದಿಂದ ದಿಢೀರ್ ಕರೆ ಹೋಗಿದ್ದು, ಸುಳ್ಯದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಕಾಂಗ್ರೆಸ್ ನೀಡಿರುವ ಆಫರ್ ಬಗ್ಗೆ ನಿರ್ಧರಿಸಲು ಅವರು ಹತ್ತು ದಿನಗಳ ಕಾಲಾವಕಾಶ ಕೋರಿದ್ದಾರೆ. ಜಾನಪದ ವಿದ್ವಾಂಸ ಕತ್ತಲ್ಸರ್ ಧಾರ್ಮಿಕ ಕೇಂದ್ರಗಳಲ್ಲಿ ಭಾಷಣಕಾರರಾಗಿ ಗುರುತಿಸಿಕೊಂಡವರು. ಹಿಂದೂಪರ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ಜಾನಪದ, ಸಂಸ್ಕೃತಿ ಹಾಗೂ ಹಿಂದುತ್ವ ಪ್ರತಿಪಾದನೆಯ ಶೈಲಿಯ ತನ್ನ ಮಾತುಗಾರಿಕೆ ಮೂಲಕ ಅಪಾರ ಹಿಂದೂ ಕಾರ್ಯಕರ್ತರ ಪ್ರೀತಿಯನ್ನು ಗಳಿಸಿಕೊಂಡಿದ್ದಾರೆ. ಸುಳ್ಯ ಭಾಗದಲ್ಲಿ ಅವರಿಗೆ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ. ಸುಳ್ಯದಲ್ಲಿ ಬೆಜೆಪಿ ಗೆಲುವಿನಲ್ಲಿ ಹಿಂದುತ್ವ ಪ್ರಬಲವಾಗಿ ಕೆಲಸ ಮಾಡುತ್ತದೆ ಎಂಬ ಸತ್ಯವನ್ನು ಅರಿತ ಕಾಂಗ್ರೆಸ್ ಇಲ್ಲಿ ಕತ್ತಲ್ಸರ್ ಅವರನ್ನು ಕಣಕ್ಕಿಳಿಸಿ ಬಿಜೆಪಿಗೆ ತಿರುಗೇಟು ನೀಡಲು ನಿರ್ಧರಿಸಿದ್ದು, ಇದು ಕೇಸರಿ ಪಡೆಯಲ್ಲಿ ತಳಮಳ ಸೃಷ್ಟಿಸಿದೆ.
ಕತ್ತಲ್ಸರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಲ್ಲಿ ಬಿಜೆಪಿಗೆ ಅಪಾರ ನಷ್ಟವನ್ನರಿತಿರುವ ಬಿಜೆಪಿ ನಾಯಕರು ಕತ್ತಲ್ಸರ್ ರವರನ್ನು ರಾಜಕೀಯ ಕ್ಷೇತ್ರಕ್ಕೆ ಕಾಲಿಡದಂತೆ ತಡೆಯುವ ಪ್ರಯತ್ನವನ್ನು ನಡೆಸಿದ್ದಾರೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಅವರ ಅಪಾರ ಅಭಿಮಾನಿಗಳು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆ ಸೇರ್ಪಡೆಯಾಗಬಾರದೆಂದು ವಿನಂತಿಯನ್ನು ಮಾಡಿಕೊಳ್ಳುತ್ತಿದ್ದಾರೆ.