(ನ್ಯೂಸ್ ಕಡಬ) newskadaba.com ಮಂಡ್ಯ, ಸೆ. 22. ಸುಪ್ರೀಂ ಕೋರ್ಟ್ ನಲ್ಲಿ ಗುರುವಾರದಂದು ನಡೆದ ಸಭೆಯಲ್ಲಿ ಕಾವೇರಿ ನದಿ ನೀರು ಹಂಚಿಕೆಯ ವಿಚಾರದಲ್ಲಿ ಮತ್ತೆ ರಾಜ್ಯಕ್ಕೆ ಹಿನ್ನೆಡೆಯಾಗಿದ್ದು, ರೈತರು, ಸಾರ್ವಜನಿಕರು ಹಾಗೂ ಹೋರಾಟಗಾರರು ಈ ತೀರ್ಪಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ನಾಳೆ ಮಂಡ್ಯ ಬಂದ್‌ಗೆ ಕರೆ ನೀಡಲಾಗಿದೆ.
ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿದ್ದ ಆದೇಶವನ್ನೇ ಸುಪ್ರೀಂಕೋರ್ಟ್ ಎತ್ತಿ ಹಿಡಿದಿದ್ದು, ಪ್ರತಿನಿತ್ಯ ತಮಿಳುನಾಡಿಗೆ ಐದು ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಮಧ್ಯಂತರ ತೀರ್ಪು ನೀಡಿದೆ.
ಕಾವೇರಿ ನದಿ ನೀರು ಹಂಚಿಕೆಯಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯಕ್ಕೆ ಹಿನ್ನೆಡೆಯಾಗಿರುವ ಹಿನ್ನೆಲೆ ಹೋರಾಟವನ್ನು ತೀವ್ರಗೊಳಿಸಲು ಮುಂದಾಗಿರುವ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮಂಡ್ಯ ಬಂದ್ ಗೆ ಕರೆ ನೀಡಿದೆ. ಸೆ.23ರಂದು ಜಿಲ್ಲೆಯಾದ್ಯಂತ ಬಂದ್ ಮಾಡಿ ರಾಜ್ಯ, ಕೇಂದ್ರ ಸರ್ಕಾರಗಳಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ. ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳ ನಾಯಕರು, ಮುಖಂಡರು, ಕಾರ್ಯಕರ್ತರು ಕೈಜೋಡಿಸುವಂತೆ ಮನವಿ ಮಾಡಿದೆ.