(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 21. ಶಿಕ್ಷಣಕ್ಕೆ ಒತ್ತು ನೀಡಲು ಸುಜಜ್ಜಿತ ವಿದ್ಯಾರ್ಥಿ ನಿಲಯಗಳ ಸ್ಥಾಪನೆಗೆ ಮಹತ್ವವಿದೆ, ಅದನ್ನು ಮನಗಂಡು ಸಮಾಜ ಸುಧಾರಕರಾದ ಕುದ್ಮುಲ್ ರಂಗರಾವ್ ಅವರು ಒಂದು ನೂರು ವರ್ಷಗಳ ಹಿಂದೆಯೇ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಲಿತರು ಹಾಗೂ ಧ್ವನಿ ಇಲ್ಲದವರಿಗೆ ಆಗುತ್ತಿದ್ದ ಅನ್ಯಾಯವನ್ನು ತಡೆಯಲು, ಅವರಲ್ಲಿ ಬದಲಾವಣೆ ತರಲು ಹೋರಾಟ ಮಾಡಿದರು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಅಭಿಪ್ರಾಯಪಟ್ಟರು. ಅವರು ಬುಧವಾರ ನಗರದ ಕೊಡಿಯಾಲ್ ಬೈಲ್‍ನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನೂತನವಾಗಿ ನಿರ್ಮಿಸಲಾಗಿರುವ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿಯ ಬಾಲಕಿಯರ ನೂತನ ವಿದ್ಯಾರ್ಥಿ ನಿಲಯಗಳನ್ನು ಉದ್ಘಾಟಿಸಿ ಮಾತನಾಡಿದರು.
ಕೊಡಿಯಾಲ್ ಬೈಲ್‍ನಲ್ಲಿ ವಿದ್ಯಾರ್ಥಿ ನಿಲಯದ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದ್ದು, 156 ಮೆಟ್ರಿಕ್ ಪೂರ್ವ ಹಾಗೂ 126 ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರಿಗೆ ಅನುಕೂಲವಾಗಲಿದೆ ಶಿಕ್ಷಣಕ್ಕೆ ಒತ್ತು ನೀಡುವುದು ಎಲ್ಲರ ಕರ್ತವ್ಯ. ಕುದ್ಮುಲ್ ರಂಗರಾವ್ ಅವರು 100 ವರ್ಷ ಹಿಂದೆ ಶಿಕ್ಷಣ ವಂಚಿತರ ಪರ ಧ್ವನಿ ಎತ್ತಿ ಕ್ರಾಂತಿ ಮಾಡಿದ ಮಹಾತ್ಮರು, ಅವರ ಹೆಸರಿನಲ್ಲಿ ಇಲ್ಲಿಯೇ ಇದ್ದ ಹಾಸ್ಟೆಲ್ ಈಗ ಮರು ನಿರ್ಮಾಣ ಆಗಿದೆ ವಿದ್ಯಾರ್ಥಿನಿಯರು ಅದರ ಸದುಪಯೋಗ ಮಾಡಿಕೊಳ್ಳಬೇಕೆಂದರು.
ಕುದ್ಮುಲ್ ರಂಗರಾವ್ ಅವರು ಸಮಾಜದ ಅನ್ಯಾಯಗಳ ವಿರುದ್ಧ ಹೋರಾಟ ಮಾಡಿದರು. ಸಾಮಾಜಿಕ ಸ್ವಾತಂತ್ರ್ಯಕ್ಕಾಗಿ ದೊಡ್ಡ ಹೋರಾಟವನ್ನೇ ಮಾಡಿದವರು. ಅಸ್ಪೃಶ್ಯತೆ, ಮಹಿಳಾ ಶೋಷಣೆ, ಶೋಷಿತ ವರ್ಗಗಳನ್ನು ಮೇಲೆತ್ತುವ ಅವರ ಹೋರಾಟ ಸ್ವಾತಂತ್ರ್ಯ ಹೋರಾಟದ ಜತೆ ಸೇರಿಸಿದ್ದರಿಂದ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ಬಂತು. ಈ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರು ಹರಿಜನರನ್ನು ಒಟ್ಟಿಗೆ ಕರೆದೊಯ್ಯುವ ಕೆಲಸ ಮಾಡಿದರು. ಅದೇ ಕೆಲಸವನ್ನು ಇಲ್ಲಿ ಕುದ್ಮುಲ್ ರಂಗರಾವ್ ಮಾಡಿದರು. ಡಾ. ಬಿ.ಆರ್. ಅಂಬೇಡ್ಕರ್ ಅವರಿಗೂ ಮೊದಲೇ ಈ ಎಲ್ಲ ಕಾರ್ಯಗಳನ್ನು ಕುದ್ಮುಲ್ ರಂಗರಾವ್ ಅವರು ಮಾಡಿದರು ಎಂದು ಹೇಳಿದರು.
ರಾಜ್ಯ ಬಜೆಟ್‍ನಲ್ಲಿ ಪರಿಶಿಷ್ಟ ಜಾತಿಗೆ 17.65% ಸೇರಿದಂತೆ ಪ.ಜಾತಿ ಹಾಗೂ ಪ. ಪಂಗಡಕ್ಕೆ ಶೇ.24 ಅನುದಾನ ಮೀಸಲಿಡಲು ಈ ಹಿಂದಿನ ಸರ್ಕಾರದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀರ್ಮಾನಿಸಿ, ಅಷ್ಟು ಹಣವನ್ನು ಸಂಬಂಧಿಸಿದ ಸಮುದಾಯಕ್ಕೆ ಖರ್ಚು ಮಾಡಲೇಬೇಕು ಎಂದು ತಿಳಿಸಿದ್ದರು, ಅದರಿಂದ ಆ ಸಮುದಾಯದ ಅಭಿವೃದ್ಧಿ ಮಾಡಲು ಸಾಧ್ಯವಾಯಿತು. ಕಾಂಟ್ರಾಕ್ಟಲ್ಲೂ ಮೀಸಲಾತಿ ತರಲಾಯಿತು ಎಂದವರು ಹೇಳಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಇಲ್ಲಿ ಹಿಂದೆ ತೀರಾ ಹಳೆ ಹಾಸ್ಟೆಲ್ ಇತ್ತು. ಕುದ್ಮುಲ್ ರಂಗರಾವ್ ಅವರೇ ಈ ಸ್ಥಳದಾನ ಮಾಡಿದ ವಿಶೇಷ ಸ್ಥಳ ಇದು. ಎಸ್.ಸಿ, ಎಸ್ಟಿಗಳನ್ನು ಮುಖ್ಯವಾಹಿನಿಗೆ ತರಲು ವಿದ್ಯಾಸಂಸ್ಥೆ ಆರಂಭಿಸಿದಾಗ ಬಹಳ ಟೀಕೆ ಎದುರಾಗಿತ್ತು. ಆದರೂ ಅನೇಕ ಕಡೆ ಶಾಲೆ ಮಾಡಿದ್ದಾರೆ. ಅವರ ಕೊಡುಗೆ ಬಹಳ ದೊಡ್ಡದು. ಕುದ್ಮುಲ್ ರಂಗರಾವ್ ಅವರ ಕೊಡುಗೆಗಳ ಬಗ್ಗೆ ಜನರಿಗೆ ತಿಳಿಸಿಕೊಡುವ ಕೆಲಸ ಆಗಬೇಕಿದೆ ಎಂದರು. 3 ಕೋಟಿ ರೂ. ಅನುದಾನದಲ್ಲಿ ಕುದ್ಮುಲ್ ರಂಗರಾವ್ ಅವರ ಸಮಾಧಿ ಅಭಿವೃದ್ಧಿ ಆಗಲಿದೆ. 23 ಎಸ್ಸಿ ಕಾಲನಿಗಳು ನನ್ನ ಕ್ಷೇತ್ರದಲ್ಲಿವೆ, ಅವುಗಳ ಅಭಿವೃದ್ಧಿ ಕಾರ್ಯ ಆಗಲಿದೆ ಎಂದು ಹೇಳಿದರು.
ರಾಜ್ಯ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಫರೀದ್ ಘನ ಉಪಸ್ಥಿತಿ ವಹಿಸಿದ್ದರು. ವಿಧಾನ ಪರಿಷತ್ ಶಾಸಕರಾದ ಹರೀಶ್ ಕುಮಾರ್, ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಕಾರ್ಪೊರೇಟರ್ ಎ.ಸಿ. ವಿನಯರಾಜ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ವೇದಿಕೆಯಲ್ಲಿದ್ದರು. ಎಂ. ದೇವದಾಸ್ ಅವರು ಕುದ್ಮುಲ್ ರಂಗರಾವ್ ಕುರಿತು ಉಪನ್ಯಾಸ ನೀಡಿದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಾಲತಿ ಪಿ. ಸ್ವಾಗತಿಸಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ್ ಅಡಿಗ ವಂದಿಸಿದರು.