ಸುಳ್ಯ: ವ್ಯಕ್ತಿಯ ಮೇಲೆ ತಂಡದಿಂದ ಹಲ್ಲೆ- ನಗದು ದರೋಡೆ

(ನ್ಯೂಸ್ ಕಡಬ) newskadaba.com ಸುಳ್ಯ, ಸೆ. 20. ಆಟೋದಲ್ಲಿ ಬಂದು ಪ್ರಯಾಣಿಕನಿಗೆ ಹಲ್ಲೆ ನಡೆಸಿ ನಗದು ಹಾಗೂ ಮೊಬೈಲ್ ದರೋಡೆ ಮಾಡಿರುವ ಘಟನೆ ತಾಲೂಕಿನ ಹಳೆಗೇಟು ಬಳಿ‌ ನಡೆದಿದೆ.


ಹಲ್ಲೆಗೊಳಗಾದವರನ್ನು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಾರುಗುಂದ ಗ್ರಾಮದ ನಿವಾಸಿ ದರ್ಶನ್‌ ‌ಎಂದು ಗುರುತಿಸಲಾಗಿದೆ. ದರ್ಶನ್ ವೈಯಕ್ತಿಕ ಕೆಲಸದ ನಿಮಿತ್ತ ಸುಳ್ಯಕ್ಕೆ ಬಂದಿದ್ದು, ಮಂಗಳವಾರ ರಾತ್ರಿ 11.15ರ ಸುಮಾರಿಗೆ ಸುಳ್ಯ ಬಸ್ಸು ನಿಲ್ದಾಣಕ್ಕೆ ತೆರಳುವ ಉದ್ದೇಶದಿಂದ ಸುಳ್ಯ ಕಸಬಾ ಗ್ರಾಮದ ಹಳೆಗೇಟು ಎಂಬಲ್ಲಿ ರಸ್ತೆ ಬದಿ ಬಾಡಿಗೆ ವಾಹನಕ್ಕೆ ಕಾಯುತ್ತಿದ್ದರು. ಈ ವೇಳೆ ಆಟೋ ರಿಕ್ಷಾವೊಂದು ಬಂದಿದೆ. ಅದರಲ್ಲಿ ಅದಾಗಲೇ ಇಬ್ಬರು ಪ್ರಯಾಣಿಕರು ಕೂತಿದ್ದು, ದರ್ಶನ್‌ ಅವರು ಅದೇ ಅಟೋರಿಕ್ಷಾವನ್ನು ಹತ್ತಿದ್ದರು. ಈ ಸಂದರ್ಭ ಚಾಲಕ ಹಾಗೂ ಪ್ರಯಾಣಿಕರಿಬ್ಬರು ಸೇರಿ ಅವರ ಕೈಯಲ್ಲಿದ್ದ ಬ್ಯಾಗ್‌ ನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಇದನ್ನು ವಿರೋಧಿಸಿದಾಗ, ದುಷ್ಕರ್ಮಿಗಳು ದರ್ಶನ್‌ಗೆ ಹಲ್ಲೆ ನಡೆಸಿ, ಬ್ಯಾಗ್ ಕಿತ್ತುಕೊಂಡು ಅವರನ್ನು ರಿಕ್ಷಾದಿಂದ ಹೊರಹಾಕಿ ಆಟೋದಲ್ಲಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಬ್ಯಾಗಿನಲ್ಲಿ ವ್ಯವಹಾರದ ಹಣ ಒಟ್ಟು 3.5 ಲಕ್ಷ ರೂಪಾಯಿ, ಎರಡು ಮೊಬೈಲ್ ಗಳು, ಗುರುತಿನ ಚೀಟಿಗಳು ಹಾಗೂ ಮೂರು ಎಟಿಎಂ ಕಾರ್ಡ್ ಗಳಿದ್ದವು ಎಂದು ತಿಳಿದುಬಂದಿದೆ. ಈ ಕುರಿತು ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಮಹಿಳೆಯರಿಗಾಗಿ ಪಶುಸಂಗೋಪನಾ ಕಾರ್ಯಕ್ರಮಗಳ ಅನುಷ್ಠಾನ

error: Content is protected !!
Scroll to Top