(ನ್ಯೂಸ್ ಕಡಬ) newskadaba.com ವಿಟ್ಲ, ಫೆ.07. ಬುಧವಾರದಂದು ಬೆಳಿಗ್ಗೆ ಕಾರುಗಳನ್ನು ತುಂಬಿಕೊಂಡು ಹೋಗುತ್ತಿದ್ದ ಕಂಟೈನರ್ ಲಾರಿಯೊಂದು ರೈಲ್ವೇ ಬ್ರಿಡ್ಜ್ ನ ಸೇಫ್ ಗಾರ್ಡ್ ಗೆ ಢಿಕ್ಕಿ ಹೊಡೆದು ಸಿಲುಕಿಕೊಂಡ ಪರಿಣಾಮ ಮಾಣಿ-ಪುತ್ತೂರು ರಾಜ್ಯ ರಸ್ತೆ ತಡೆ ಉಂಟಾಗಿದ್ದ ಹಿನ್ನೆಲೆಯಲ್ಲಿ ಲಾರಿಯನ್ನು ತೆರವುಗೊಳಿಸಲಾಯಿತು.
ಮೈಸೂರಿನಿಂದ ಪುತ್ತೂರು ಮಾರ್ಗವಾಗಿ ಮಾಣಿ ಮೂಲಕ ಮಂಗಳೂರಿಗೆ ತೆರಳುತ್ತಿದ್ದ ಕಂಟೈನರ್ ಲಾರಿಯ ಎತ್ತರ ಹೆಚ್ಚಾಗಿದ್ದುದರಿಂದ ಹಿಂದಕ್ಕೂ ಮುಂದಕ್ಕೂ ಹೋಗಲಾಗದೆ ಈ ಅಪಘಾತ ಸಂಭವಿಸಿದೆ. ಘಟನೆಯಿಂದಾಗಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳು ಉದ್ದುದ್ದ ಸಾಲು ನಿಂತಿದ್ದ ಪರಿಣಾಮ ಸಂಚಾರ ಅಸ್ತವ್ಯಸ್ತವಾಯಿತು. ಕಬಕದಿಂದ ವಾಹನಗಳನ್ನು ವಿಟ್ಲ ಕಲ್ಲಡ್ಕ ಮೂಲಕ ಕಳುಹಿಸಲಾಯಿತು. ಇದೇ ಕಾರಣಕ್ಕೆ ವಿಟ್ಲದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಲಾರಿ ಢಿಕ್ಕಿಯಿಂದ ರೈಲ್ವೆ ಮೇಲ್ಸೇತುವೆಯ ಒಂದು ಸೇಫ್ ಗಾರ್ಡ್ ಗೆ ಹಾನಿಯಾಗಿದೆ. ಇದೀಗ ಕಂಟೈನರ್ ತೆರವುಗೊಳಿಸಲಾಗಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.