(ನ್ಯೂಸ್ ಕಡಬ) newskadaba.com ಇಂದೋರ್, ಆ. 18. ಸಾಕುನಾಯಿಗಳ ವಿಚಾರದಲ್ಲಿ ನೆರೆಹೊರೆಯವರ ಜೊತೆ ಜಗಳವುಂಟಾಗಿ ವ್ಯಕ್ತಿಯೋರ್ವ ಜನರ ಗುಂಪಿನ ಮೇಲೆ ಗುಂಡು ಹಾರಿಸಿದ ಪರಿಣಾಮ ಇಬ್ಬರು ಮೃತಪಟ್ಟು, ಎಂಟು ಮಂದಿ ಗಾಯಗೊಂಡ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.
ಮೃತರನ್ನು ರಾಹುಲ್ (28) ಮತ್ತು ವಿಮಲ್ (35) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿ ಖಾಸಗಿ ಬ್ಯಾಂಕ್‌ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ರಾಜ್‌ಪಾಲ್ ರಾಜಾವತ್, ತನ್ನ ನಾಯಿಯೊಂದಿಗೆ ವಾಕಿಂಗ್ ಹೋಗಿದ್ದ ವೇಳೆ ನೆರೆಮನೆಯ ನಾಯಿ ರಾಜಾವತ್ ಅವರ ನಾಯಿ ಜೊತೆ ಕಚ್ಚಾಡಿಕೊಂಡಿದೆ. ಈ ವಿಚಾರವಾಗಿ ನಾಯಿಯ ಮಾಲೀಕರು ಪರಸ್ಪರ ಜಗಳವಾಡಿದ್ದಾರೆ. ಹೊರಗಡೆ ಜಗಳ ನಡೆಯುತ್ತಿದ್ದರಿಂದ ನೆರೆಹೊರೆಯ ಹಲವು ಮಂದಿ ಅಲ್ಲಿ ಸೇರಿದ್ದರು. ಈ ವೇಳೆ ಕೋಪಗೊಂಡ ರಾಜಾವತ್ ಮನೆಗೆ ತೆರಳಿ ಮನೆಯೊಳಗಿದ್ದ ತನ್ನ ಬಂದೂಕನ್ನು ತಂದು ತಾರಸಿ ಮೇಲಿಂದ ಮನೆಯ ಹೊರಗೆ ನಿಂತಿದ್ದ ಜನರ ಮೇಲೆ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ ಆರು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಮರೇಂದ್ರ ಸಿಂಗ್ ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.