(ನ್ಯೂಸ್ ಕಡಬ) newskadaba.com ಮಂಗಳೂರು, ಆ. 16. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಕಛೇರಿ ಮೇರಿಹಿಲ್ ನಲ್ಲಿ 77ನೇ ಸ್ವಾತಂತ್ರ್ಯೋತ್ಸವ ನಡೆಯಿತು.
ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರು ಮತ್ತು ಪೌರರಕ್ಷಣಾ ತಂಡದ ಮುಖ್ಯಪಾಲಕರಾದ ಡಾ|| ಮುರಲೀಮೋಹನ ಚೂಂತಾರು ಇವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸ್ವಾತಂತ್ರ್ಯೋತ್ಸವದ ಈ ದಿನದಂದು ಎಲ್ಲರೂ ಭಕ್ತಿಯಿಂದ, ಪ್ರೀತಿಯಿಂದ ಗೌರವದಿಂದ ಜಾತಿಮತ ಭೇದವಿಲ್ಲದೆ ಸ್ವಾತಂತ್ರ್ಯೋತ್ಸವ ಸಂಭ್ರಮವನ್ನು ಆಚರಿಸಬೇಕು. ನಮಗೆ ಮಹಾತ್ಮಾಗಾಂಧಿ, ಸರ್ದಾರ್ ಪಟೇಲ್, ಸುಭಾಸ್‍ಚಂದ್ರ ಬೋಸ್ ಮುಂತಾದ ಮಹನೀಯರ ತ್ಯಾಗ ಬಲಿದಾನದಿಂದ 76 ವರ್ಷಗಳ ಹಿಂದೆ ಬ್ರಿಟಿಷರಿಂದ ಸ್ವಾತಂತ್ರ್ಯ ದೊರಕಿದೆ. ನಮಗೆ ದೊರೆತ ಸ್ವಾತಂತ್ರ್ಯವನ್ನು ಸ್ವೇಚ್ಛಾಚಾರ ಎಂದು ಯುವಜನರು ತಿಳಿದುಕೊಂಡು ತಪ್ಪು ದಾರಿ ಹಿಡಿಯಬಾರದು. 77ನೇ ಈ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯ ಜೊತೆಗೆ ನಾವೆಲ್ಲರೂ ನಮ್ಮ ಜವಾಬ್ದಾರಿಗಳನ್ನು ಅರಿತು ನಿಭಾಯಿಸಿದಲ್ಲಿ ಬಲಿಷ್ಠ ಭಾರತದ ನಿರ್ಮಾಣ ಸಾಧ್ಯ ಎಂದು ಸಮಾದೇಷ್ಟರು ನುಡಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ|| ಕಿಶನ್ ರಾವ್ ಬಾಳಿಲ ಇವರು ಮಾತನಾಡಿ 77ನೇ ಸ್ವಾತಂತ್ರ್ಯೋತ್ಸವದಂದು ಪ್ರತಿ ಪ್ರಜೆಗೂ ಸಂಭ್ರಮದ ಹಬ್ಬ. ಈ ದಿನವನ್ನು ಐತಿಹಾಸಿಕ ದಿನವಾಗಿ ಮಾತ್ರ ಉಳಿಯಬಾರದು. ಇದನ್ನು ದೇಶಕ್ಕಾಗಿ ಮಡಿದ ಸ್ವಾತಂತ್ರ್ಯ ಯೋಧರ ಬಲಿದಾನವನ್ನು ಜ್ಞಾಪಿಸುವ ದಿನವಾಗಬೇಕು. ಸ್ವಾತಂತ್ರ್ಯ ಯೋಧರ ಪ್ರಾಣತ್ಯಾಗ ಮಾಡಿದವರನ್ನು ನೆನೆಯುವ ದಿನ. ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಂವಿಧಾನಕ್ಕೆ ಗೌರವಿಸುವ ದಿನ. ನಮ್ಮ ಮುಂದಿನ ಪೀಳಿಗೆಗೆ ನಾವು ಆದರ್ಶಪ್ರಾಯವಾಗಬೇಕಾದರೆ ನಾವೆಲ್ಲರು ಹೆಚ್ಚಿನ ಹೊಣೆಗಾರಿಕೆ, ಜವಾಬ್ದಾರಿ, ಕಾರ್ಯಕ್ಷಮತೆ, ಧನಾತ್ಮಕ ಚಿಂತನೆಯಲ್ಲಿ ಮತ್ತು ದೇಶದ ರಕ್ಷಣೆಯಲ್ಲಿ ಗೃಹರಕ್ಷಕರು ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಪ್ರತಿ ಮನೆಮನೆಗಳಲ್ಲಿ, ಮನಗಳಲ್ಲಿ ದೇಶಪ್ರೇಮ, ದೇಶಭಕ್ತಿ ಉಕ್ಕಿ ಹರಿಯಲಿ ಎಂದು ಅಭಿಪ್ರಾಯಪಟ್ಟರು.
ಇನ್ನೋರ್ವ ಅತಿಥಿಯಾಗಿ ಆಗಮಿಸಿದ ವಿಜಯವಾಣಿ ಪತ್ರಿಕೆಯ ಹಿರಿಯ ಪತ್ರಕರ್ತ ಹರೀಶ್ ಮೋಂಟುಕಾನ ಇವರು ಮಾತನಾಡಿ, ನಮ್ಮ ಭಾರತ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ಹೋರಾಟಗಾರ ಮಹಾತ್ಮಗಾಂಧಿಯವರು ಸ್ವಾತಂತ್ರ್ಯಹೋರಾಟದ ಸಮಯದಲ್ಲಿ ಮಂಗಳೂರಿಗೆ ಮೂರು ಬಾರಿ ಭೇಟಿ ನೀಡಿ ಸ್ವಾತಂತ್ರ್ಯಕ್ಕಾಗಿ ಜನರಲ್ಲಿ ಹೋರಾಟದ ಮನೋಭಾವ ತುಂಬಿ ಜಾಗೃತಿ ಮೂಡಿಸಿದ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಉಪಸಮಾದೇಷ್ಟರಾದ ಶ್ರೀ ರಮೇಶ್ ವಂದನಾರ್ಪಣೆಗೈದರು. ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಶ್ಯಾಮಲಾ ಎ., ಮಂಗಳೂರು ಘಟಕದ ಘಟಕಾಧಿಕಾರಿ ಸೀನಿಯರ್ ಪ್ಲಟೂನ್ ಕಮಾಂಡರ್ ಶ್ರೀ ಮಾರ್ಕ್‍ಶೇರ್ ಹಾಗೂ ಹಿರಿಯ ಗೃಹರಕ್ಷಕರಾದ ರಮೇಶ್ ಭಂಡಾರಿ, ಲೀಲಾ ಕುಕ್ಯಾನ್, ರಾಜಶ್ರೀ ಮತ್ತು ಒಟ್ಟು 120 ಗೃಹರಕ್ಷಕ/ಗೃಹರಕ್ಷಕಿಯರು ಉಪಸ್ಥಿತರಿದ್ದರು.