(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.11. ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಕೃಷಿ ಸಚಿವ ಚೆಲುವರಾಯಸ್ವಾಮಿ ರಾಜೀನಾಮೆ ಪಡೆದು 2 ಲಂಚದ ಪ್ರಕರಣಗಳನ್ನೂ ಲೋಕಾಯುಕ್ತ ತನಿಖೆಗೆ ವಹಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಅವರು ಆಗ್ರಹಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ“ಜಗನ್ನಾಥ ಭವನ”ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ, ಡಿಸಿಎಂ ಅವರು ಬಿಲ್ ಪಾವತಿ ತಡೆಹಿಡಿದು ಇಡೀ ಯೋಜನೆಯ 6 ಸಾವಿರ ಕೋಟಿ ದುಡ್ಡಿನ ಮೇಲೆ ಈಗಲೇ ಕಮಿಷನ್ ಕೊಡಲು ಕೇಳುತ್ತಿದ್ದಾರೆ ಎಂದು ಗುತ್ತಿಗೆದಾರರೇ ಹೇಳಿದ್ದಾರೆ ಎಂದು ಟೀಕಿಸಿದರು.
ಕೆಲಸ ಆರಂಭವಾಗದೆ ಇದ್ದರೆ ಅದನ್ನು ಆರಂಭಿಸಲು ಶೇ 10 ಕಮಿಷನ್ ಕೇಳುತ್ತಿದ್ದಾರೆಂದು ಆರೋಪ ಇದೆ ಎಂದರು. ಗುತ್ತಿಗೆದಾರರಿಗೆ ಹಿಂಸೆ ನೀಡುವ ಉದ್ದೇಶ ಇವರದು, ನ್ಯಾಯ, ನೀತಿ, ಧರ್ಮ ಒಂದು ಸಣ್ಣ ಕಣದಲ್ಲೂ ಇಲ್ಲ. ಯಾವುದೇ ಯೋಜನೆಗೆ ಒಪ್ಪಿಗೆ ಕೊಡುತ್ತಿಲ್ಲ ಎಂದು ಆಕ್ಷೇಪಿಸಿದರು. ಉಪ ಮುಖ್ಯಮಂತ್ರಿಗಳ ಮೇಲಿನ ಆಪಾದನೆ ಮೇಲೆ ಲೋಕಾಯುಕ್ತ ತನಿಖೆಗೆ ಮುಖ್ಯಮಂತ್ರಿಗಳು ಸೂಚಿಸಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್ ಪಕ್ಷವು ಅಧಿಕಾರ ವಹಿಸಿಕೊಂಡ ಎರಡೂವರೆ ತಿಂಗಳಲ್ಲೇ ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕೊಲೆ, ಸುಲಿಗೆ, ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಟೀಕಿಸಿದರು. ಸಿಎಂ ಜೊತೆ ಹಲವಾರು ಸಿಎಂಗಳು, ಶ್ಯಾಡೋ ಸಿಎಂ ಗಳಿದ್ದು, ಎಟಿಎಂ ಸರಕಾರವೆಂದು ಪ್ರಖ್ಯಾತಿ ಪಡೆದಿದೆ ಎಂದು ಟೀಕಿಸಿದರು ಎನ್ನಲಾಗಿದೆ.