ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಗೆ ಚಾಲನೆ – ಅಗತ್ಯ ಲಸಿಕೆ ಕೊಡಿಸಲು ಜಿಲ್ಲಾಧಿಕಾರಿ ಕರೆ

(ನ್ಯೂಸ್ ಕಡಬ) newskadaba.com ಮಂಗಳೂರು,ಆ. 08. ಉತ್ತಮ ಆರೋಗ್ಯದಿಂದ ಬಲಿಷ್ಠ ಸಮಾಜ ನಿರ್ಮಾಣ ಸಾಧ್ಯ, ಈ ದಿಸೆಯಲ್ಲಿ ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಆರೋಗ್ಯ ಇಲಾಖೆಯಿಂದ ನಿಯಮಿತವಾಗಿ ನೀಡಲಾಗುವ ಲಸಿಕೆಗಳನ್ನು ಪೋಷಕರು ತಮ್ಮ ಮಕ್ಕಳಿಗೆ ಕೊಡಿಸುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಕರೆ ನೀಡಿದರು. ಅವರು ಸೋಮವಾರದಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸುರತ್ಕಲ್‍ನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಕೃಷ್ಣಾಪುರ ಐದನೇ ಬ್ಲಾಕ್‍ನಲ್ಲಿರುವ ಯುವಕ ಮಂಡಲ ಅಂಗನವಾಡಿ ಕೇಂದ್ರದಲ್ಲಿ  ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆರೋಗ್ಯಪೂರ್ಣ ಜೀವನದಿಂದ ಶೈಕ್ಷಣಿಕವಾಗಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ, ಆರೋಗ್ಯ ಇಲಾಖೆಯ ಸೇವೆಗಳು ಜನರಿಗೆ ತಲುಪಲು ಎಲ್ಲರ ಸಹಭಾಗಿತ್ವ ಮುಖ್ಯ, ಇಂದು ನೀಡಲಾಗುತ್ತಿರುವ ಲಸಿಕೆಗಳು ಅರ್ಹವಿರುವ ಪ್ರತಿಯೊಂದು ಮಗುವಿಗೂ ತಲುಪಬೇಕು ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಅವರು ಮಾತನಾಡಿ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಪ್ರತಿಯೊಂದು ಅರ್ಹ ಮಗುವನ್ನ ಗುರುತಿಸಿ ಲಸಿಕೆ ನೀಡಬೇಕು ಪೋಷಕರು ಕೂಡಾ ಹೆಚ್ಚಿನ ಆದ್ಯತೆ ನೀಡಿ ಮಕ್ಕಳಿಗೆ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎಂದರು. ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯ ಇಲಾಖೆಯು ಕೊರೋನಾ ಸಮಯ ಸೇರಿದಂತೆ ಎಲ್ಲಾ ವಿಧದಲ್ಲೂ ಉತ್ತಮ ಸೇವೆ ಸಲ್ಲಿಸಿ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್, ಡಾ. ರಾಜೇಶ್, ಡಾ.ಸುಜಯ್, ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಲಕ್ಷ್ಮೀಶೇಖರ ದೇವಾಡಿಗ, ಶ್ವೇತಾ ಪೂಜಾರಿ, ಯುವಕ ಮಂಡಲದ ಅಧ್ಯಕ್ಷ ಶಿವಪ್ರಸಾದ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group