(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 31. ಮಣಿಪುರದ ಪ್ರಸ್ತುತ ಪರಿಸ್ಥಿತಿಯಿಂದಾಗಿ ಕರ್ನಾಟಕಕ್ಕೆ ಬರುವ ಮಣಿಪುರದ ವಿದ್ಯಾರ್ಥಿಗಳಿಗೆ ಸರಕಾರಿ ಶಾಲೆಗಳಲ್ಲಿ ದಾಖಲಾತಿಯನ್ನು ನೀಡಬೇಕು ಎಂದು ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಆದೇಶಿಸಿದೆ.
ಈ ಕುರಿತು ಸುತ್ತೋಲೆ ಹೊರಡಿಸಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ, ಮಣಿಪುರದ ವಿದ್ಯಾರ್ಥಿಗಳಲ್ಲಿ ಶಾಲಾ ದಾಖಲಾತಿಗಾಗಿ ಪ್ರಮಾಣ ಪತ್ರ, ವರ್ಗಾವಣೆ ಪತ್ರ ಹಾಗೂ ಬೇರೆ ಶಾಲೆಗೆ ಸಂಬಂಧಿಸಿದ ದಾಖಲೆಗಳು ಇಲ್ಲದಿದ್ದಲ್ಲಿ, ಅದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ದಾಖಲಾತಿಯನ್ನು ನೀಡಬೇಕು ಎಂದಿದೆ. ಇನ್ನು ವಿದ್ಯಾರ್ಥಿ ಅಥವಾ ಪೋಷಕರಿಂದ ಸ್ವಯಂ ದೃಢೀಕರಣ ಪತ್ರವನ್ನು ಪಡೆದು ವಿದ್ಯಾರ್ಥಿಯು ಹಿಂದಿನ ಶಾಲೆಯಲ್ಲಿ ಯಾವ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುತ್ತಾರೆಯೋ ಅದೇ ತರಗತಿಗಳಿಗೆ ದಾಖಲಾತಿ ಮಾಡಿಕೊಳ್ಳಲು ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಹೇಳಿದೆ.