(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 25. ಇನ್ನುಮುಂದೆ ನವವಿವಾಹಿತರು ವಿವಾಹ ನೋಂದಣಿ ಪ್ರಮಾಣ ಪತ್ರವನ್ನು ಆನ್ ಲೈನ್ ಮೂಲಕ ಪಡೆಯಬಹುದು. ಈಗಾಗಲೇ ಜನನ- ಮರಣ ಪ್ರಮಾಣ ಪತ್ರ ಗ್ರಾಮ ಪಂಚಾಯತ್ ಗಳಲ್ಲೇ ವಿತರಿಸುವುದಕ್ಕೆ ರಾಜ್ಯ ಸರಕಾರ ಆದೇಶಿಸಿತ್ತು. ಈ ಬೆನ್ನಲ್ಲೇ ಇನ್ನುಮುಂದೆ ವಿವಾಹ ನೋಂದಣಿ ಪ್ರಮಾಣ ಪತ್ರ ನ್ ಲೈನ ನಲ್ಲೇ ಲಭ್ಯವಾಗುವಂತೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕಾರಿ ಬಿ.ಆರ್ ಮಮತಾ ಮಾಹಿತಿ ನೀಡಿದರು.
ನೋಂದಣಿ ಮತ್ತು ಹಿಂದೂ ವಿವಾಹ ನೋಂದಣಿ ಪ್ರಮಾಣಪತ್ರವನ್ನು ಆನ್ ಲೈನ್ ಮೂಲಕ ವಿತರಿಸಲು ಸಿದ್ದತೆ ಕೈಗೊಳ್ಳಲಾಗುತ್ತಿದೆ. ಈ ಪ್ರಕ್ರಿಯೆ ಮುಗಿದ ನಂತರ ವಿವಾಹ ನೋಂದಣಿ ಪ್ರಮಾಣ ಪತ್ರ ಆನ್ ಲೈನ್ ನಲ್ಲೇ ಸಿಗಲಿದೆ. ಇದನ್ನು ಪ್ರಸ್ತುತ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲೆ ಮಾಡಲಾಗುತ್ತದೆ. ಆನ್ ಲೈನ್ ಪ್ರಕ್ರಿಯೆಯು ಸಂಪೂರ್ಣವಾಗಿ ಪರೀಕ್ಷಿಸಲ್ಪಟ್ಟಿದೆ ಮತ್ತು ಸಿದ್ದವಾಗಿದೆ. ಇದನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಇನ್ಸ್ ಪೆಕ್ಟರ್ ಜನರಲ್ ಬಿ.ಆರ್. ಮಮತಾ ಹೇಳಿದ್ದಾರೆ.
ಸದ್ಯ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ಅಥವಾ ಆನ್ ಲೈನ್ ನಲ್ಲಿ ಲಭ್ಯವಿರುವ ಮೆಮೊರಂಡಮ್ ಆಫ್ ಮ್ಯಾರೇಜ್ ಫಾರ್ಮ್ ನ್ನು 15 ರೂ.ಗಳ ಶುಲ್ಕಕ್ಕೆ ಭರ್ತಿ ಮಾಡಬೇಕು. ವಧು ವರರ ಹೆಸರು, ವಯಸ್ಸು, ಪ್ರಸ್ತುತ ವೈವಾಹಿಕ ಸ್ಥಿತಿ, ವಿವಾಹ ದಿನಾಂಕ, ವಿಳಾಸ ಮತ್ತು ಮೂವರು ಸಾಕ್ಷಿಗಳಿಗೆ ಸಂಬಂಧಿಸಿದ ಮಾಹಿತಿ, ಮದುವೆ ಸಮಯದಲ್ಲಿ ತೆಗೆದ ಆಮಂತ್ರಣ ಪತ್ರಿಕೆ ಹಾಗೂ ಫೊಟೋವನ್ನು ಒದಗಿಸಬೇಕು. ಇದೀಗ ಇದೆಲ್ಲವನ್ನೂ ಆನ್ ಲೈನ್ ನಲ್ಲಿ ಜನರು https://igr.karnataka.gov.in ವೆಬ್ ಸೈಟ್ ಗೆ ಭೇಟಿನೀಡಿ ವಿವರಗಳನ್ನು ಸಮೂದಿಸಬಹುದಾಗಿದೆ ಎಂದು ಹೇಳಿದರು.