(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 25. ರಾಜ್ಯ ಕಾಂಗ್ರೆಸ್ ಸರಕಾರದ ಗ್ಯಾರಂಟಿಯಾದ ಗೃಹಲಕ್ಷ್ಮೀ ಯೋಜನೆಯ ಅರ್ಜಿ ಸಲ್ಲಿಕೆಗೆ ಈಗಾಗಲೇ ನೋಂದಣಿ ಪ್ರಾರಂಭವಾಗಿದ್ದು, ಹಲವು ಅರ್ಜಿಗಳು ಸಲ್ಲಿಕೆಯಾಘಿವೆ. ಇದರ ಬೆನ್ನಲ್ಲೇ ಸಚಿವ ಸಂತೋಷ್ ಲಾಡ್, ಗೃಹಲಕ್ಷ್ಮೀ ಯೋಜನೆಯ ಅರ್ಜಿ ಸಲ್ಲಿಕೆಗೆ ಹಣ ತೆಗೆದುಕೊಂಡಲ್ಲಿ ಸೇವಾ ಕೇಂದ್ರಗಳ ಲೈಸೆನ್ಸ್ ರದ್ದುಗೊಳಿಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮೀ ಯೋಜನೆಯ ಅರ್ಜಿ ಸಲ್ಲಿಸಲು ಯಾರೂ ಹಣ ಕೊಡಬೇಡಿ. ಇದಕ್ಕೆ ಹಣ ಪಡೆಯುವ ಹಾಗಿಲ್ಲ, ರಾಜ್ಯದಲ್ಲಿ ಯಾರೇ ಹಣ ತೆಗೆದುಕೊಂಡರೂ ಅವರ ಲೈಸೆನ್ಸ್ ರದ್ದುಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ. ಈಗಾಗಲೇ ಅರ್ಜಿ ಸಲ್ಲಿಕೆಗೆ ಅಕ್ರಮವಾಗಿ ಹಣ ಪಡೆದುಕೊಂಡಿರುವ ಮೂರು ಸೈಬರ್ ಕೇಂದ್ರಗಳ ವಿರುದ್ದ ಪ್ರಕರಣ ದಾಖಲಾದ ಘಟನೆ ರಾಯಚೂರಿನಿಂದ ವರದಿಯಾಗಿತ್ತು. ಈ ಆರೋಪದ ಹಿನ್ನೆಲೆ ತಹಶೀಲ್ದಾರ್ ನೇತೃತ್ವದ ತಂಡ ದಾಳಿ ನಡೆಸಿದ್ದರು.
ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಹಾಕಲು ಹಣ ಪಡೆಯುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮ ಜರುಗಿಸುವುದಾಗಿ ಮಹಿಳಾ ಮತ್ತು ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಅರ್ಜಿ ಸಲ್ಲಿಕೆ ಸಂಪೂರ್ಣ ಉಚಿತವಾಗಿದ್ದು, ಹಣ ವಸೂಲಿ ಮಾಡಿದವರ ಲಾಗಿನ್ ಐಡಿ, ಪಾಸ್ವರ್ಡ್ ರದ್ದು ಮಾಡಲು ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.