(ನ್ಯೂಸ್ ಕಡಬ) newskadaba.com ಕಾಸರಗೋಡು, ಜು. 24. ಬೇಕಲ ಕೋಟೆಗೆ ತೆರಳಿದ್ದ ಆರು ಮಂದಿಯ ತಂಡದ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ಮೇಲ್ಪರಂಬ ಎಂಬಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ ಕುರಿತು ವರದಿಯಾಗಿದೆ.
ಬಂಧಿತರನ್ನು ಅಬ್ದುಲ್ ಮನ್ಸೂರ್, ಅಬ್ದುಲ್ ಖಾದರ್ ಅಫೀಕ್, ಮುಹಮ್ಮದ್ ನಿಸಾರ್ ಮತ್ತು ಬಿ.ಕೆ ಆರಿಫ್ ಎಂದು ಗುರುತಿಸಲಾಗಿದೆ. ಆರು ಮಂದಿಯ ತಂಡದ ಪೈಕಿ ಓರ್ವನ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಬೇಕಲ ಕೋಟೆ ವೀಕ್ಷಿಸಿ, ಮರಳುತ್ತಿದ್ದಾಗ ಮೇಲ್ಪರಂಬ ಬಳಿ ತಂಡವೊಂದು ತಡೆದು ಹಲ್ಲೆ ನಡೆಸಿದೆ. ತಂಡದಲ್ಲಿ ಮೂವರು ಹುಡುಗರು ಮತ್ತು ಮೂವರು ಹುಡುಗಿಯರು ಇದ್ದರೆನ್ನಲಾಗಿದೆ. ಇವರು ಮೇಲ್ಪರಂಬದ ಹೋಟೆಲ್ ವೊಂದರಲ್ಲಿ ಆಹಾರ ಸೇವಿಸಲು ಕಾರಿನಲ್ಲಿ ತಲಪಿದಾಗ ತಂಡವು ಅಸಭ್ಯವಾಗಿ ವರ್ತಿಸಿ ಹಲ್ಲೆ ನಡೆಸಿದೆನ್ನಲಾಗಿದೆ. ವಾಹನದಿಂದ ಕೆಳಿಗಿಳಿಯಲು ಅನುವು ಮಾಡಿಕೊಡದೆ ತಡೆದ ತಂಡವು ಹಲ್ಲೆ ನಡೆಸಿದ್ದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು ನಾಲ್ವರನ್ನು ವಶಕ್ಕೆ ತೆಗೆದುಕೊಂಡಿದ್ದು, ಕಾರಿನಲ್ಲಿದ್ದ ಯುವತಿಯರನ್ನು ಪೋಷಕರನ್ನು ಕರೆಸಿ ಬಿಡುಗಡೆಗೊಳಿಸಿ ಬಂಧಿತರ ವಿರುದ್ಧ ಗುಂಪುಗೂಡಿ ಹಲ್ಲೆ, ದಿಗ್ಬಂಧನ, ಹಲ್ಲೆ ಸೇರಿದಂತೆ ಹಲವು ಮೊಕದ್ದಮೆ ಹೂಡಲಾಗಿದೆ.