ಸಾಂಬಾರ್ ವಿಚಾರಕ್ಕೆ ಹೊಡೆದಾಟ- ಚೂರಿ ಎಸೆತ – ಬಾಲಕ ಬಾಲನ್ಯಾಯ ಮಂಡಳಿ ಮುಂದೆ ಹಾಜರ್

(ನ್ಯೂಸ್ ಕಡಬ) newskadaba.com ಮಂಗಳೂರು. ಜು. 21. ಇಲ್ಲಿನ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ವೊಂದರಲ್ಲಿ ಸಾಂಬಾರ್ ವಿಚಾರವಾಗಿ ಗಲಾಟೆ ನಡೆದು ಸಹಪಾಠಿಯ ಮೇಲೆ ವಿದ್ಯಾರ್ಥಿಯೊಬ್ಬ ಚೂರಿ ಎಸೆದ ಪರಿಣಾಮ ಗಾಯಗೊಂಡ ವಿದ್ಯಾರ್ಥಿಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿ ಚೂರಿ ಎಸೆದ ವಿದ್ಯಾರ್ಥಿಯನ್ನು ಪೊಲೀಸರು ಬಾಲನ್ಯಾಯ ಮಂಡಳಿಯ ಮುಂದೆ ಗುರುವಾರದಂದು ಹಾಜರುಪಡಿಸಿದ್ದಾರೆ ಎನ್ನಲಾಗಿದೆ.

ಚೂರಿ ಎಸೆದ ವಿದ್ಯಾರ್ಥಿಗೆ ಮೊದಲ ಸುತ್ತಿನ ಆಪ್ತ ಸಮಾಲೋಚನೆಯನ್ನು ಪೊಲೀಸರ ವರದಿ ಆಧಾರದಲ್ಲಿ ನಡೆಸಲಾಗಿದ್ದು, ಘಟನೆಯ ಬಗ್ಗೆ ವಿದ್ಯಾರ್ಥಿ ಪಶ್ಚಾತ್ತಾಪ ಹೊಂದಿರುವಂತೆ ತೋರುತ್ತದೆ. ಪೊಲೀಸರು ಸಲ್ಲಿಸುವ ವರದಿಗಳನ್ನು ಆಧರಿಸಿ ಮುಂದಿನ ಕ್ರಮಕೈಗೊಳ್ಳುತ್ತೇವೆ ಎಂದು ಬಾಲ ನ್ಯಾಯ ಮಂಡಳಿ ಮೂಲಗಳು ತಿಳಿಸಿವೆ.

ಶಾಲೆಯಲ್ಲಿ ಮಧ್ಯಾಹ್ನದ ಊಟದ ಸಂದರ್ಭದಲ್ಲಿ ಸಾಂಬಾರ್‌ ಚೆಲ್ಲಿತ್ತು. ಇದರಿಂದ ಸಿಟ್ಟಿಗೊಳಗಾದ ವಿದ್ಯಾರ್ಥಿಯು ಸಹಪಾಠಿಯ ಕೆನ್ನೆಗೆ ಬಾರಿಸಿದ್ದ. ಎಲ್ಲರ ಎದುರೇ ಏಟು ತಿಂದಿದ್ದರಿಂದ ಅವಮಾನಗೊಂಡ ವಿದ್ಯಾರ್ಥಿಯು ಸ್ವಲ್ಪ ಹೊತ್ತಿನ ಬಳಿಕ ತನ್ನ ಚೀಲದಿಂದ ಹರಿತವಾದ ಚೂರಿಯೊಂದನ್ನು ತೆಗೆದು, ತನಗೆ ಹೊಡೆದ ವಿದ್ಯಾರ್ಥಿಯತ್ತ ಎಸೆದಿದ್ದ. ಅದು ವಿದ್ಯಾರ್ಥಿಯ ಎದೆ ಭಾಗದಲ್ಲಿ ಚುಚ್ಚಿತ್ತು ಎನ್ನಲಾಗಿದೆ. ಸದ್ಯ ಗಾಯಾಳು ವಿದ್ಯಾರ್ಥಿ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ. ವಿದ್ಯಾರ್ಥಿಯೊಂದಿಗೆ ಬ್ಯಾಗ್ ನಲ್ಲಿ ಯಾಕೆ ಚೂರಿ ಇಟ್ಟುಕೊಂಡದ್ದು ಎಂದು ಶಿಕ್ಷಕರು ವಿಚಾರಿಸಿದಾಗ ‘ಊರಿನ ಬಸ್‌ ನಿಲ್ದಾಣದ ಬಳಿ ಚೂರಿ ಸಿಕ್ಕಿತ್ತು. ಅದನ್ನು ಎತ್ತಿಟ್ಟುಕೊಂಡಿದ್ದೆ’ ಎಂದು ಆತ ತಿಳಿಸಿದ್ದಾನೆ ಎಂಬುವುದಾಗಿ ಮೂಲಗಳು ತಿಳಿಸಿವೆ.

error: Content is protected !!

Join the Group

Join WhatsApp Group