ಕೊಣಾಜೆ: ಶಾಲೆಯಲ್ಲಿ ಸಾಂಬಾರ್ ವಿಚಾರಕ್ಕೆ ಹೊಡೆದಾಟ- ಸಹಪಾಠಿಯ ಎದೆಗೆ ಚೂರಿ ಎಸೆದ ವಿದ್ಯಾರ್ಥಿ

(ನ್ಯೂಸ್ ಕಡಬ) newskadaba.com ಉಳ್ಳಾಲ, ಜು. 20. ಇಲ್ಲಿನ ನರಿಂಗಾನ ಗ್ರಾಮದ ಶಾಲೆಯೊಂದರಲ್ಲಿ ಮಧ್ಯಾಹ್ನದ ಊಟ ಮಾಡುತ್ತಿದ್ದ ಸಂದರ್ಭ ಬಟ್ಟೆಗೆ ಸಾಂಬಾರು ಚೆಲ್ಲಿದ ಕಾರಣಕ್ಕೆ ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಿಬ್ಬರ ನಡುವೆ ಜಗಳ ನಡೆದಿದ್ದು, ಓರ್ವ ವಿದ್ಯಾರ್ಥಿ ಮತ್ತೊಬ್ಬ ವಿದ್ಯಾರ್ಥಿಯ ಎದೆಗೆ ಚಾಕುವಿನಿಂದ ಇರಿದ ಘಟನೆ ವರದಿಯಾಗಿದೆ.


ಶಾಲೆಯಲ್ಲಿ ಮಧ್ಯಾಹ್ನ ಊಟ ಮಾಡುತ್ತಿದ್ದ ವೇಳೆ ತಟ್ಟೆಯಿಂದ ಸಾಂಬಾರು ಚೆಲ್ಲಿದ್ದು, ಬಟ್ಟೆಯಲ್ಲಿ ಕಲೆ ಆಗಿತ್ತು. ಇದರಿಂದ ಕೋಪಗೊಂಡ ವಿದ್ಯಾರ್ಥಿ ಸಾಂಬಾರು ಚೆಲ್ಲಿದ ವಿದ್ಯಾರ್ಥಿಗೆ ಕಪಾಳ ಮೋಕ್ಷ ಮಾಡಿದ್ದಲ್ಲದೇ, ಆತನ ನೋಟ್ ಪುಸ್ತಕವನ್ನೇ ಸಾಂಬಾರಿಗೆ ಹಾಕಿ ತರಗತಿಯಿಂದ ಹೊರ ನಡೆದಿದ್ದಾನೆ.


ಇತ್ತ ಹೊಡೆಸಿಕೊಂಡ ವಿದ್ಯಾರ್ಥಿ ತನ್ನ ಬ್ಯಾಗ್ ನಿಂದ ಚೂರಿಯೊಂದನ್ನು ತೆಗೆದು ಹಲೆಗೈದವನ ಮೇಲೆ ಎಸೆದಿದ್ದಾನೆ ಎನ್ನಲಾಗಿದೆ. ಆದರೆ, ಶಾಲಾ ವಿದ್ಯಾರ್ಥಿಯ ಬ್ಯಾಗಿನಲ್ಲಿ ಚಾಕು ಹೇಗೆ ಬಂತು ಎನ್ನುವುದೇ ಪ್ರಶ್ನೆಯಾಗಿದೆ. ಘಟನೆಯ ದೃಶ್ಯಾವಳಿಗಳು ತರಗತಿ ಕೊಠಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿರುವುದಾಗಿ ವರದಿಯಾಗಿದೆ.


ಚೂರಿ ಎಸೆದ ಭರದಲ್ಲಿ ವಿದ್ಯಾರ್ಥಿಯ ಬಲ ಎದೆ ಭಾಗದ ಪಕ್ಕಕ್ಕೆ ಚೂರಿ ಚುಚ್ಚಿದ್ದು ಗಾಯಗೊಂಡ ವಿದ್ಯಾರ್ಥಿಯನ್ನು ಕೂಡಲೇ ವೈಸ್ ಪ್ರಿನ್ಸಿಪಾಲ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದ ಪರಿಣಾಮ ವಿದ್ಯಾರ್ಥಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ಒಂಬತ್ತನೇ ತರಗತಿ ವಿದ್ಯಾರ್ಥಿ ಚಾಕುವಿನಿಂದ ಸಹಪಾಠಿಯ ಮೇಲೆ ದಾಳಿ ನಡೆಸಿದ್ದು ಆಘಾತಕಾರಿ ಸಂಗತಿ. ಘಟನೆಯ ಮಾಹಿತಿ ಪಡೆದ ಮಂಗಳೂರು ದಕ್ಷಿಣ ಉಪ ವಿಭಾಗ ಎಸಿಪಿ ಧನ್ಯ ನಾಯಕ್, ಕೊಣಾಜೆ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಪ್ರಕಾಶ್ ದೇವಾಡಿಗ ಅವರನ್ನೊಳಗೊಂಡ ಅಧಿಕಾರಿಗಳು ಶಾಲಾಭಿವೃದ್ಧಿ ಸಮಿತಿ ಸದಸ್ಯರು ಶಾಲೆಗೆ ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆಯ ಕುರಿತಂತೆ ಮಕ್ಕಳ ನ್ಯಾಯಾಲಯಕ್ಕೆ ಅಧಿಕಾರಿಗಳು ವರದಿ ಸಲ್ಲಿಸಿದ್ದು, ಪೋಲಿಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

error: Content is protected !!

Join the Group

Join WhatsApp Group