ಔಷಧಿಗೆ ಚೀಟಿ ನೀಡುವ ವೈದ್ಯರ ವಿರುದ್ಧ ಕಠಿಣ ಕ್ರಮ ► ಆರೋಗ್ಯ ಸಚಿವ ರಮೇಶ್ ಕುಮಾರ್ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಜ.28 ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರಗಿನಿಂದ ಔಷಧಿ ತರಿಸಲು ಚೀಟಿ ನೀಡುವ ಕೆಟ್ಟ ಪದ್ಧತಿಗೆ ಕಡಿವಾಣ ಹಾಕಲಾಗಿದ್ದು, ಔಷಧಿಗಾಗಿ ಚೀಟಿ ಬರೆದು ನೀಡುವ ವೈದ್ಯರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಅವರು ಇತ್ತೀಚೆಗೆ ಹೊಸನಗರದಲ್ಲಿ ಏಳು ಕೋಟಿ ರೂ. ವೆಚ್ಚದಲ್ಲಿ 50 ಹಾಸಿಗೆಯಿಂದ 100 ಹಾಸಿಗೆಗೆ ಮೇಲ್ದರ್ಜೆಗೇರಿಸಿದ ಸಾರ್ವಜನಿಕ ಆಸ್ಪತ್ರೆ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿ, ಎಲ್ಲಾ ಆಸ್ಪತ್ರೆಗಳಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಅಗತ್ಯವಾಗುವ ಔಷಧಿಗಳ ಬಗ್ಗೆ ಒಂದು ತಿಂಗಳು ಮುಂಚಿತವಾಗಿಯೆ ಪ್ರಸ್ತಾವನೆ ಸಲ್ಲಿಸಲು ಎಲ್ಲಾ ಜಿಲ್ಲಾ ಔಷಧಿ ಘಟಕಗಳಿಗೆ ಸೂಚನೆ ನೀಡಲಾಗಿದೆ. ಅಗತ್ಯ ಔಷಧಿಗಳನ್ನು 48 ಗಂಟೆಗಳ ಒಳಗಾಗಿ ಪೂರೈಕೆ ಮಾಡಲಾಗುತ್ತಿದೆ. ತಮಗೆ ಅಗತ್ಯವಿರುವ ಔಷಧಿಗಳ ಬಗ್ಗೆ ಆಸ್ಪತ್ರೆಗಳು ಸರ್ಕಾರಕ್ಕೆ ಪಟ್ಟಿ ನೀಡಬೇಕೆ ವಿನಾ ವೈದ್ಯರು ರೋಗಿಗಳಿಗೆ ಚೀಟಿ ನೀಡುವುದಲ್ಲ. ಎಲ್ಲಾ 176 ತಾಲೂಕು ಆಸ್ಪತ್ರೆಗಳಲ್ಲಿ ಜನೌಷಧಿ ಮಳಿಗೆಗಳನ್ನು ಆರಂಭಿಸಲಾಗುತ್ತಿದೆ ಎಂದು ಹೇಳಿದರು.

Also Read  ಕಡಬ ಮತ್ತು ಪುತ್ತೂರು ಉಭಯ ತಾಲೂಕಿನ ಕೊರೋನ ಅಪ್ ಡೇಟ್

ರಾಜ್ಯದಲ್ಲಿ ಖಾಸಗಿ ವೈದ್ಯಕೀಯ ಸೇವೆಯನ್ನು ನಿಯಂತ್ರಿಸುವ ಕೆಪಿಎಂಇ ತಿದ್ದುಪಡಿ ಕಾಯ್ದೆ ಅನುಷ್ಟಾನ ಪ್ರಕ್ರಿಯೆ ಫೆಬ್ರವರಿ 10 ಒಳಗಾಗಿ ಪೂರ್ಣಗೊಂಡು ಚುನಾವಣೆ ಒಳಗಾಗಿ ಜಾರಿಗೆ ಬರಲಿದೆ ಎಂದು ಹೇಳಿದರು. ಇನ್ನು ಮುಂದೆ ನೇರವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಸರ್ಕಾರದಿಂದ ಶುಲ್ಕ ಮರು ಪಾವತಿಸುವ ವ್ಯವಸ್ಥೆಯನ್ನು ಕೊನೆಗೊಳಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲದ ಚಿಕಿತ್ಸೆಗಳನ್ನು ಖಾಸಗಿ ಆಸ್ಪತ್ರೆಯಲ್ಲಿ ಪಡೆದರೆ ಮಾತ್ರ ಶುಲ್ಕವನ್ನು ಮರು ಪಾವತಿ ಮಾಡಲಾಗುವುದು. ಒಂದು ಸಾವಿರ ಕೋಟಿ ರೂ.ಗಳನ್ನು ಕಳೆದ 10 ವರ್ಷಗಳಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರದಿಂದ ನೀಡಲಾಗಿದೆ ಎಂದರು. ಫೆಬ್ರವರಿ ಅಂತ್ಯದ ಒಳಗಾಗಿ ಉಚಿತ ಡಯಾಲಿಸಿಸ್ ಘಟಕಗಳನ್ನು ಎಲ್ಲಾ ತಾಲೂಕುಗಳಲ್ಲಿ ಆರಂಭಿಸಲಾಗುವುದು. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಡಯಾಲಿಸಿಸ್ ಘಟಕಗಳ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ ಎಂದರು.

Also Read  ಕಡಬ: ಮಿನಿ ವಿಧಾನಸೌಧಕ್ಕೆ ಶಾಸಕ ಅಂಗಾರರಿಂದ ಗುದ್ದಲಿ ಪೂಜೆ ➤ ಶಂಕುಸ್ಥಾಪನೆ ನಡೆದು ವರ್ಷದ ಬಳಿಕ ಕಾಮಗಾರಿಗೆ ಚಾಲನೆ

error: Content is protected !!
Scroll to Top