(ನ್ಯೂಸ್ ಕಡಬ) newskadaba.com ಮೂಡಬಿದಿರೆ, ಜ.26. ಜನವರಿ 25 ನೇ ಗುರುವಾರ ಮೃತಪಟ್ಟ ಆಳ್ವಾಸ್ ವಿದ್ಯಾಸಂಸ್ಥೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ರಚನಾ ಆತ್ಮಹತ್ಯಯೆ ಬಗ್ಗೆ ಆಕೆಯ ಹೆತ್ತವರು ಅನುಮಾನ ವ್ಯಕ್ತಪಡಿಸಿದ್ದು, ಇದೀಗ ಹಲವು ಊಹಾಪೋಹಗಳು ಹುಟ್ಟಿಕೊಂಡಿವೆ.
ಆಳ್ವಾಸ್ ನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿದ್ದ ಚಿತ್ರದುರ್ಗ ಮೂಲದ ರಚನಾ ನಿನ್ನೆ 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಕಾಲೇಜು ಆಡಳಿತ ಮಂಡಳಿಯವರು ಆಕೆಯ ಪೋಷಕರಿಗೆ ಮಾಹಿತಿ ನೀಡಿದ್ದರು. ಆತ್ಮಹತ್ಯೆಗೆ ಮುನ್ನ ರಚನಾ ತನ್ನ ಡೆತ್ ನೋಟ್ ನಲ್ಲಿ ಪರೀಕ್ಷೆಯಲ್ಲಿ ಅಂಕ ಕಡಿಮೆ ಬಂದಿರುವ ಬಗ್ಗೆ ಹಾಗೂ ತನಗೆ ಕ್ಯಾನ್ಸರ್ ಇರುವ ಬಗ್ಗೆ ಬರೆದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಉಲ್ಲೇಖಿಸಿದ್ದಳು. ಆದರೆ ಆ ಡೆತ್ ನೋಟ್ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಆಕೆಯ ಪೋಷಕರು ಅದರಲ್ಲಿರುವ ಕೈ ಬರಹ ಆಕೆಯದಲ್ಲ. ಅಲ್ಲದೆ ಆಕೆಗೆ ಯಾವುದೇ ರೀತಿಯ ಅನಾರೋಗ್ಯವಿರಲಿಲ್ಲ. ಆಕೆಗೆ ಅನಾರೋಗ್ಯವಿದ್ದಿದ್ದರೆ ಕುಟುಂಬದ ವೈದ್ಯರಿಗೆ ಮಾಹಿತಿಯಿರುತ್ತಿತ್ತು. ಮತ್ತು ಆಕೆಯ ಮಾರ್ಕ್ಸ್ ಬಗ್ಗೆ ನಮ್ಮಿಂದ ಯಾವುದೇ ಒತ್ತಡ ಇರಲಿಲ್ಲ ಎಂದು ಪೊಷಕರು ತಿಳಿಸಿದ್ದಾರೆ. ಒಂದು ವೇಳೆ ರಚನಾ 5ನೇ ಮಹಡಿಯಿಂದ ಬಿದ್ದಿರುವುದೇ ಆಗಿದ್ದರೆ ಆಕೆಯ ತಲೆ, ಕೈ-ಕಾಲು ಅಥವಾ ದೇಹದ ಇತರ ಭಾಗಕ್ಕೆ ಬಲವಾದ ಪೆಟ್ಟು ಬಿದ್ದು, ಮೂಳೆ ಮುರಿತವುಂಟಾಗಬೇಕಿತ್ತು. ಆದರೆ, ಆಕೆಯ ಮೈಯಲ್ಲಿ ಯಾವುದೇ ತರಚಿದ ಗಾಯ ಕೂಡಾ ಇಲ್ಲವೆಂಬುವುದು ಪೋಷಕರಿಗೆ ಅನುಮಾನ ಮೂಡಿಸಿದೆ.