ಪಿಎಸ್ಐ ನೇಮಕಾತಿ ಹಗರಣ ➤ 52 ಆರೋಪಿಗಳನ್ನು ಶಾಶ್ವತ ಡಿಬಾರ್ ಮಾಡಿ ಆದೇಶಿಸಿದ ರಾಜ್ಯ ಸರಕಾರ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 21. ಪೊಲೀಸ್ ಸಬ್ ಇನ್ಸ್‌ ಪೆಕ್ಟರ್ 545 ಹುದ್ದೆಗಳ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯಲ್ಲಿ ಅಕ್ರಮವೆಸಗಿ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುವ ಅಭ್ಯರ್ಥಿಗಳನ್ನು ಪೊಲೀಸ್ ಇಲಾಖೆಯು ನಡೆಸುವ ಎಲ್ಲಾ ಪರೀಕ್ಷೆಗಳಲ್ಲಿ ಭಾಗವಹಿಸದಂತೆ ಶಾಶ್ವತವಾಗಿ ಡಿಬಾರ್ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

 

ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ 545 ಹಾಗೂ ಸೇವಾನಿರತ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿ 2021ರ ಅಕ್ಟೊಬರ್ 3ರಂದು ಬೆಳಗ್ಗೆ 11.00 ರಿಂದ 12.30 ರವರೆಗೆ ಹಾಗೂ ಮಧ್ಯಾಹ್ನ 3.00 ರಿಂದ 4.30ರವರೆಗೆ ಪತ್ರಿಕೆ-2ರ ಲಿಖಿತ ಪರೀಕ್ಷೆಗಳನ್ನು ರಾಜ್ಯದ 17 ಕೇಂದ್ರಗಳಾದ ಬೆಂಗಳೂರು ನಗರ, ಮೈಸೂರು ನಗರ, ಮಂಗಳೂರು ನಗರ, ಹುಬ್ಬಳ್ಳಿ-ಧಾರವಾಡ ನಗರ, ಕಲಬುರಗಿ ನಗರ, ತುಮಕೂರು ಜಿಲ್ಲೆ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ನಡೆಸಲಾಗಿತ್ತು. ಈ ಪರೀಕ್ಷೆಗಳಲ್ಲಿ ಅಕ್ರಮ ನಡೆದಿರುವ ಕುರಿತು ದೂರು ಕೇಳಿಬಂದ ಹಿನ್ನೆಲೆ ಸರ್ಕಾರವು ಅಕ್ರಮಗಳ ಕುರಿತು ತನಿಖೆ ನಡೆಸುವಂತೆ ಸಿ.ಐ.ಡಿ, ಘಟಕಕ್ಕೆ ವಹಿಸಿದೆ. ಅದರಂತೆ ಸಿ.ಐ.ಡಿ. ಕಛೇರಿಯಿಂದ ಪೊಲೀಸ್‌ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) 545 ಹುದ್ದೆಗಳ ಲಿಖಿತ ಪರೀಕ್ಷೆಗಳಲ್ಲಿ ಅಕ್ರಮವೆಸಗಿರುವ 52 ಆರೋಪಿಗಳನ್ನು ವಿಚಾರಣೆ ನಡೆಸಿ, ಸದರಿ ಆರೋಪಿಗಳ ವಿರುದ್ಧ ಬೆಂಗಳೂರು ನಗರ, ಕಲಬುರಗಿ ನಗರ, ಹುಬ್ಬಳ್ಳಿ-ಧಾರವಾಡ ನಗರ ಹಾಗೂ ತುಮಕೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಅಪರಾಧ ಮೊಕದ್ದಮೆಗಳನ್ನು ದಾಖಲಿಸಿ ದಸ್ತಗಿರಿ ಮಾಡಲಾಗಿದೆ. ಅಲ್ಲದೇ ಆರೋಪಿಗಳ ಪೈಕಿ ಕೆಲವರಲ್ಲಿ  ಪರೀಕ್ಷೆಯ ಸಂದರ್ಭ ಬ್ಲೂಟೂತ್ ಹಾಗೂ ಇತರೆ ಎಲೆಕ್ಟ್ರಾನಿಕ್ ಡಿವೈಸ್‌ಗಳನ್ನು ಉಪಯೋಗಿಸಿ ಆಕ್ರಮವಾಗಿ ಪರೀಕ್ಷೆ ಬರೆದಿರುವುದು ಕಂಡು ಬಂದಿದೆ. ಹಾಗೂ ಇನ್ನು ಕೆಲವು ಅಭ್ಯರ್ಥಿಗಳು ಅನುಚಿತ ಮಾರ್ಗವನ್ನು ಅನುಸರಿಸಿ ಓ.ಎಂ.ಆರ್.ಗಳನ್ನು ಅಕ್ರಮವಾಗಿ ತಿದ್ದುಪಡಿ ಮಾಡಿಸಿಕೊಂಡಿರುವುದು ಕಂಡು ಬಂದಿರುತ್ತದೆ. ಈ ರೀತಿಯಾಗಿ ಲಿಖಿತ ಪರೀಕ್ಷೆಗಳನ್ನು ಅಕ್ರಮ ಹಾಗೂ ಕಾನೂನು ಬಾಹಿರ ಚಟುವಟಿಕೆಗಳ ಮೂಲಕ ಬರೆದಿರುವ ಹಿನ್ನೆಲೆ ಶಾಶ್ವತವಾಗಿ ಡಿಬಾರ್ ಮಾಡಿ ಆದೇಶ ಹೊರಡಿಸಲಾಗಿದೆ.

Also Read  ಜನವರಿಯಲ್ಲಿ ‘ಯುವನಿಧಿ’ ಯೋಜನೆ ಜಾರಿ- ಸಿಎಂ ಸಿದ್ದರಾಮಯ್ಯ

error: Content is protected !!
Scroll to Top