ಅಪ್ಪನಿಂದಲೇ ಅಧಿಕಾರ ಸ್ವೀಕರಿಸಿದ ಮಗಳು ➤ ತಂದೆಗೆ ವರ್ಗಾವಣೆ ಸ್ಥಳಕ್ಕೆ ಪುತ್ರಿಯ ನಿಯೋಜನೆ

(ನ್ಯೂಸ್ ಕಡಬ) newskadaba.com ಮಂಡ್ಯ, ಜೂ. 21. ಯಾವುದೇ ಅಧಿಕಾರಿಗಳು ವರ್ಗಾವಣೆ ಹೊಂದಿ ಹೊಸ ಸ್ಥಳಗಳಿಗೆ ನೇಮಕಗೊಳ್ಳುವುದು, ಈ ವೇಳೆ ಅಧಿಕಾರ ಹಸ್ತಾಂತರ ಮಾಡುವುದು ಸಮಾನ್ಯ ಸಂಗತಿ. ಆದರೆ ಮಂಡ್ಯದಲ್ಲಿ ಅಧಿಕಾರ ಹಸ್ತಾಂತರವು ಭಾವುಕ ಘಟನೆಗೆ ಸಾಕ್ಷಿಯಾಗಿದೆ. ಒಂದೆಡೆ ತಂದೆಯ ವರ್ಗಾವಣೆ, ಮತ್ತೊಂದೆಡೆ ಅದೇ ಸ್ಥಳಕ್ಕೆ ಮಗಳ ನಿಯೋಜನೆ ಹೀಗಾಗಿ ತಂದೆಯಿಂದಲೇ ಮಗಳು ಪೋಲಿಸ್‌ ಠಾಣೆಯಲ್ಲಿ ಅಧಿಕಾರ ಸ್ವೀಕರಿಸಿದ ಘಟನೆ ವರದಿಯಾಗಿದೆ.

ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಎಸ್‌.ಐ ಆಗಿದ್ದ ಬಿ‌.ಎಸ್.ವೆಂಕಟೇಶ್ ಅವರನ್ನು ಎಸ್ಪಿ ಕಛೇರಿಗೆ ವರ್ಗಾವಣೆ ಮಾಡಲಾಗಿದೆ. ಇದೇ ಸಂದರ್ಭ ತನ್ನ ಮಗಳೂ ಆದ ನೂತನ ಎಸ್ಐ ಬಿ.ವಿ.ವರ್ಷಾ ಅವರನ್ನು ಮಂಡ್ಯ ಸೆಂಟ್ರಲ್ ಠಾಣೆಗೆ ವರ್ಗಾಯಿಸಲಾಗಿತ್ತು. ಠಾಣೆಯಲ್ಲಿ ಎಸ್‌.ಐ ಆಗಿದ್ದ ಬಿ‌.ಎಸ್.ವೆಂಕಟೇಶ್ ತಮ್ಮ ಪುತ್ರಿಯೂ ಆದ ಎಸ್.ಐ ವರ್ಷಾ ಅವರಿಗೆ ಮಂಗಳವಾರ ಅಧಿಕಾರ ಹಸ್ತಾಂತರ ಮಾಡಿದ್ದು ವಿಶೇಷ ಸಂದರ್ಭವಾಗಿತ್ತು. ಇದಕ್ಕೆ ಠಾಣೆಯ ಸಿಬ್ಬಂದಿ ಸಾಕ್ಷಿಯಾಗಿದ್ದರು. ಈ ವೇಳೆ ಸಿಬ್ಬಂದಿ ಮತ್ತು ಅಲ್ಲಿಗೆ ಆಗಮಿಸಿದ ಸಾರ್ವಜನಿಕರಿಗೆ ಸಿಹಿ ವಿತರಿಸಿ ಸಂಭ್ರಮಿಸಿದರು. 2022ರ ಬ್ಯಾಚ್‌ ನಲ್ಲಿ ಪಿಎಸ್‌ಐ ಆಗಿರುವ ವರ್ಷಾ ಅವರು ಕಲುಬುರಗಿಯಲ್ಲಿ ತರಬೇತಿ ಮುಗಿಸಿ ಮಂಡ್ಯದಲ್ಲೇ ಒಂದು ವರ್ಷ ಪ್ರೊಬೆಷನರಿ ಅಧಿಕಾರಿಯಾಗಿ ಈಗ ಮಂಡ್ಯದ ಸೆಂಟ್ರಲ್ ಠಾಣೆ ಎಸ್‌ ಐ ಆಗಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ. ವೆಂಕಟೇಶ ತುಮಕೂರು ಜಿಲ್ಲೆ ಹುಲಿಯೂರು ದುರ್ಗದವರು. 16 ವರ್ಷಗಳ ಕಾಲ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ್ದು, 2010ರ ಬ್ಯಾಚ್‌ನ ಪೊಲೀಸ್ ಸಬ್ ಇನ್ಸ್​ಪೆಕ್ಟರ್ ಆಗಿ 2ನೇ ಬಾರಿ ವೃತ್ತಿ ಜೀವನ ಆರಂಭಿಸಿದ್ದರು.

Also Read  2 ವರ್ಷಗಳಿಂದ ಅಲ್ಪಸಂಖ್ಯಾತರಿಗೆ ಅನುದಾನ ನೀಡಿಲ್ಲ ➤ ಸಿಎಂ ಬೊಮ್ಮಾಯಿ       

error: Content is protected !!
Scroll to Top