(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 12. ಬಾಲ ಕಾರ್ಮಿಕರನ್ನು ನೇಮಿಸಿಕೊಳ್ಳುವ ಉದ್ಯಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಎಚ್ಚರಿಸಿದ್ದಾರೆ.
ಅವರು, ನಗರದ ಎಂ.ಜಿ. ರಸ್ತೆಯ ಮಹಾತ್ಮಾ ಗಾಂಧಿ ಪ್ರತಿಮೆಯ ಬಳಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ನಿಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿ, ಜಾಥಾಗೆ ಚಾಲನೆ ನೀಡಿದ ಬಳಿಕ ಮಾತನಾಡಿ, 18 ವರ್ಷದೊಳಗಿನ ಮಕ್ಕಳನ್ನು ಕೆಲಸ ಅಥವಾ ಸೇವೆಗೆ ಬಳಸಿಕೊಳ್ಳುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇಂದು ವಿಶ್ವದಾದ್ಯಂತ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನವನ್ನು ಆಚರಿಸಲಾಗುತ್ತಿದೆ. ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಶತಶತಮಾನಗಳಿಂದ ಮಹಿಳೆಯರೂ ಸೇರಿದಂತೆ ಶೂದ್ರರನ್ನು ಶಿಕ್ಷಣದಿಂದ ದೂರ ಇಡಲಾಗಿತ್ತು. ಹೀಗಾಗಿ ಸಮಾಜದಲ್ಲಿ ಆರ್ಥಿಕ, ಸಾಮಾಜಿಕ ಅಸಮಾನತೆ ಹೆಚ್ಚಾಗಿವೆ ಎಂದರು.