(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 12. ಮುಂಗಾರು ಪ್ರವೇಶದ ಹಿನ್ನೆಲೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು ಸೇರಿ ರಾಜ್ಯದ 8ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಚಿಕ್ಕಮಗಳೂರು ಜಿಲ್ಲೆಯ ಗಟಿಪುರ ಗ್ರಾಮದಲ್ಲಿ ಸಿಡಿಲಿಗೆ ವ್ಯಕ್ತಿಯೊಬ್ಬ ಬಲಿಯಾಗಿದ್ದಾನೆ. ಇದೇ ವೇಳೆ, ಕರಾವಳಿಯಲ್ಲಿ ಕಡಲು ಪ್ರಕ್ಷುಬ್ಧಗೊಂಡಿದ್ದು, ಕಡಲಂಚಿನಲ್ಲಿರುವ ಮನೆಗಳು, ತೆಂಗಿನ ಮರಗಳು ಸಮುದ್ರ ಪಾಲಾಗಿವೆ.
ಮಂಗಳೂರಿನ ಪಣಂಬೂರು, ಉಳ್ಳಾಲ, ಸೋಮೇಶ್ವರ, ಬಟಪಾಡಿಗಳಲ್ಲಿ ಭಾನುವಾರ ಕಡಲಂಚಿನಲ್ಲಿರುವ ಮನೆಗಳು, ತೆಂಗಿನ ಮರಗಳು ಸಮುದ್ರ ಪಾಲಾಗಿವೆ. ಉಡುಪಿ ಜಿಲ್ಲೆ ಮಲ್ಪೆ ಬೀಚಿನಲ್ಲಿ ಪ್ರವಾಸಿಗರು ಕಡಲಿಗೆ ಇಳಿಯದಂತೆ ಬೀಚಿನ ಸುಮಾರು 1 ಕಿ.ಮೀ.ನಷ್ಟುಉದ್ದಕ್ಕೂ ಸುರಕ್ಷತಾ ಬಲೆ ಹಾಗೂ ಕೆಂಪು ಬಾವುಟಗಳನ್ನು ಅಳವಡಿಸಲಾಗಿದೆ. ಈ ಮಧ್ಯೆ, ಮಂಗಳೂರು ಶಾಸಕ, ಸ್ಪೀಕರ್ ಯು.ಟಿ.ಖಾದರ್ ಹಾಗೂ ಅಧಿಕಾರಿಗಳ ಜತೆಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಭಾನುವಾರ ಉಚ್ಚಿಲ ಹಾಗೂ ಬಟಪಾಡಿಯಲ್ಲಿ ಕಡಲ್ಕೊರೆತಕ್ಕೆ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.