(ನ್ಯೂಸ್ ಕಡಬ) newskadaba.com ಬಂಟ್ವಾಳ, ಜೂ. 10. ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯತ್ ವೊಂದರ ಕಟ್ಟಡ ಕಾಮಗಾರಿಗೆಂದು ದಾಸ್ತಾನಿರಿಸಲಾಗಿದ್ದ ಕಬ್ಬಿಣದ ರಾಡ್ ಕಳವು ಮಾಡಿ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಟ್ವಾಳ ನಗರ ಠಾಣಾ ಎಸ್.ಐ.ರಾಮಕೃಷ್ಣ ನೇತೃತ್ವದ ತಂಡ ಬಂಧಿಸಿದ ಕುರಿತು ವರದಿಯಾಗಿದೆ.
ಬಂಧಿತರನ್ನು ಸರಪಾಡಿ ಪೆರ್ಲ ದರ್ಖಾಸು ನಿವಾಸಿ ವಾಹನ ಚಾಲಕ ವಿನೋದ್ ಕುಮಾರ್, ಬೆಳ್ತಂಗಡಿ ತಾಲೂಕಿನ ಪುತ್ರಿಲ ನಿವಾಸಿ ಪುನೀತ್ ಹಾಗೂ ಅಲ್ಲಿಪಾದೆ ಪುರುಷೋತ್ತಮ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ 70 ಸಾವಿರ ರೂ. ಮೌಲ್ಯದ 600 ಕೆ.ಜಿ. ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇವರು ಅಮ್ಟಾಡಿ ಗ್ರಾಮ ಪಂಚಾಯತ್ ನಲ್ಲಿ ನಡೆಯತ್ತಿದ್ಧ ಕಟ್ಟಡ ಕಾಮಗಾರಿಗೆಂದು ತಂದಿಡಲಾಗಿದ್ದ ಕಬ್ಬಿಣದ ರಾಡ್ ಗಳನ್ನು ಮಾರ್ಚ್ ತಿಂಗಳಿನ 18 ರಂದು ಕಳವು ಮಾಡಿದ್ದರು. ಈ ಬಗ್ಗೆ ಇಲ್ಲಿನ ಪಿಡಿಒ ರವಿ ಅವರು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದರು. ಅ ಬಳಿಕ ಪೋಲಿಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದರು. ಅದರಂತೆ ಎಸ್.ಐ.ರಾಮಕೃಷ್ಣ ಅವರು ಸಿಬ್ಬಂದಿಗಳೊಂದಿಗೆ ಮೊಡಂಕಾಪು ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಸಂಶಯಾಸ್ಪದ ವಾಹನವನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಸಮರ್ಪಕವಾಗಿ ಉತ್ತರ ನೀಡದ ಚಾಲಕ ಸಹಿತ ವಾಹನದಲ್ಲಿದ್ದ ಮೂವರನ್ನು ವಿಚಾರ ನಡೆಸಿದಾಗ ಅಮ್ಟಾಡಿಯಲ್ಲಿ ಕಳ್ಳತನ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.