MRPL ನಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವ ಭರವಸೆ ಈಡೇರಿಸದಿದ್ದಲ್ಲಿ ಪ್ರತಿಭಟನೆ ➤ ಯುವ ಕಾಂಗ್ರೆಸ್

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 09. ಕೇಂದ್ರ ಸರಕಾರದ ಸ್ವಾಮ್ಯದ ಒಎನ್ ಜಿಸಿ ಯ ಅಂಗಸಂಸ್ಥೆಯಾದ ಎಂಆರ್ ಪಿಎಲ್ 2023ರಲ್ಲಿ ಸುಮಾರು 50 ಹುದ್ದೆಗೆ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದ್ದು, ಆದರೆ ಅದರಲ್ಲಿ ಸ್ಥಳೀಯರಿಗೆ ನಿಗದಿತವಾಗಿ ಎಷ್ಟು ಹುದ್ದೆ ಮೀಸಲಿಡುವ ಯಾವ ಭರವಸೆ ನೀಡಲಿಲ್ಲ. ಇದರಿಂದ ಈ ಬಾರಿಯೂ ಸ್ಥಳೀಯ ಉದ್ಯೋಗಾಕಾಂಕ್ಷಿಗಳಿಗೆ ನಿರಾಸೆಯಾಗಿದೆ. ಈ ರೀತಿಯ ನೇಮಕಾತಿಯ ಪ್ರಕ್ರಿಯೆಯನ್ನು ಇಲ್ಲಿನ ಸಂಸದರು ಕೇಂದ್ರ ಪೆಟ್ರೋಲಿಯಂ ಸಚಿವರ ಜೊತೆ ಚರ್ಚಿಸಿ ತಡೆಹಿಡಿಯಬೇಕಾಗಿದೆ ಎಂದು ದ.ಕ. ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ 2021-22ರಲ್ಲಿ ಎಂಆರ್ ಪಿಎಲ್ 234 ಹುದ್ದೆಗೆ ನೇಮಕಾತಿ ಪ್ರಕ್ರಿಯೆ ನಡೆಸಿದ ಬಳಿಕ ದ.ಕ ಜಿಲ್ಲೆಯ ಇಬ್ಬರಿಗೆ ಮತ್ತು ರಾಜ್ಯದ 8 ಜನರಿಗೆ ನೇಮಕಾತಿ ನಡೆಯಿತು. ಉಳಿದಂತೆ ಯಾವ ಸ್ಥಳೀಯ ನಿರುದ್ಯೋಗಿಗಳಿಗೂ ಉದ್ಯೋಗ ದೊರೆತಿಲ್ಲ. ಈ ಸಂದರ್ಭದಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂದು ಕಾಂಗ್ರೆಸ್ ಸೇರಿದಂತೆ ಸಮಾನ ಮನಸ್ಕರ ಸಂಘಟನೆ ಪ್ರತಿಭಟನೆ ನಡೆಸಿತ್ತು. ಈ ಸಂದರ್ಭದಲ್ಲಿ ಸಂಸದರೂ, ಶಾಸಕರು ‘ಎಂಆರ್ ಪಿ ಎಲ್ ಜೊತೆ ಸಮಾಲೋಚನೆ ನಡೆಸಿ, ಸಂಸ್ಥೆ ಉದ್ಯೋಗ ನೀಡುವ ಭರವಸೆ ನೀಡಿದೆ’ ಎಂದು ತಿಳಿಸಿದ್ದರು. ಆದರೆ ಆ ಭರವಸೆ ಈಡೇರಿಲ್ಲ. ಈ ಬಾರಿ ಮತ್ತೆ ಎಂಆರ್ ಪಿಎಲ್ 50 ಹುದ್ದೆಗೆ ನೇಮಕಾತಿ ಅರ್ಜಿ ಆಹ್ವಾನಿಸಿದೆ. ಈ ಸಂದರ್ಭದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್ ಎಂ ಆರ್ ಪಿ ಎಲ್ ಅಧಿಕಾರಿಗಳ ಜೊತೆ ಸ್ಥಳೀಯರಿಗೆ ಉದ್ಯೋಗ ನೀಡಲು ಸಮಾಲೋಚನೆ ನಡೆಸಿರುವುದಾಗಿ ತಿಳಿಸಿದ್ದಾರೆ. ಆದರೆ ಕಂಪೆನಿ ಎಲ್ಲಿಯೂ ಇಷ್ಟು ಹುದ್ದೆ ಸ್ಥಳೀಯರಿಗೆ ನಿಯಮಾನುಸಾರ ನೀಡುವ ಬಗ್ಗೆ ಇದುವರೆಗೆ ಪ್ರಕಟಣೆ ನೀಡಿಲ್ಲ. ಈ ಹಿನ್ನೆಲೆ ಎಂಆರ್ ಪಿಎಲ್ ಆಹ್ವಾನಿಸಿರುವ 50 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಕೇಂದ್ರ ಪೆಟ್ರೋಲಿಯಂ ಸಚಿವರ ಮೂಲಕ ತಕ್ಷಣ ತಡೆಹಿಡಿಯಬೇಕಾಗಿದೆ. ಸ್ಥಳೀಯರಿಗೆ ಉದ್ಯೋಗ ನೀಡುವ ನಿರ್ಧಾರ ತೆಗೆದುಕೊಳ್ಳುವವರೆಗೆ ಈ ಪ್ರಕ್ರಿಯೆಯನ್ನು ಮುಂದೂಡಬೇಕು ಎಂದು ಆಗ್ರಹಿಸಿದರು. ಈ ಬಾರಿ ಹಿಂದಿನಂತೆ ಸ್ಥಳೀಯರನ್ನು ಕಡೆಗಣಿಸಿ ನೇಮಕಾತಿ ಪ್ರಕ್ರಿಯೆಯಲ್ಲಿ ತೊಡಗಿದರೆ ಯುವ ಕಾಂಗ್ರೆಸ್ ಸಮಾನ ಮನಸ್ಕ ಸಂಘಟನೆಗಳ ಜೊತೆ ಸೇರಿ ಸ್ಥಳೀಯ ಯುವ ನಿರುದ್ಯೋಗಿಗಳಿಗೆ ಉದ್ಯೋಗದ ಹಕ್ಕಿಗಾಗಿ ಹೋರಾಟ ನಡೆಸುವುದಾಗಿ ಲುಕ್ಮಾನ್ ತಿಳಿಸಿದರು.

error: Content is protected !!

Join the Group

Join WhatsApp Group