ಸಮಸ್ಯೆಗಳ ಸುರಿಮಳೆಯಲ್ಲಿ ಮುಳುಗಿದ ಕಡಬದ ಮೆಸ್ಕಾಂ ಜನಸಂಪರ್ಕ ಸಭೆ ►ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸಿ ಮೆಸ್ಕಾಂ ಅಧಿಕಾರಿಗಳು ಕಂಗಾಲು

(ನ್ಯೂಸ್ ಕಡಬ) newskadaba.com ಕಡಬ, ಜ.18. ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಕಡಬ ಉಪವಿಭಾಗಮಟ್ಟದ ವಿದ್ಯುತ್ ಗ್ರಾಹಕರ ಜನಸಂಪರ್ಕ ಸಭೆ ಅಕ್ಷರಶಃ ಸಮಸ್ಯೆಗಳ ಆಗರವನ್ನೇ ಅನಾವರಣಗೊಳಿಸಿತು. ಮೆಸ್ಕಾಂ ಮಂಗಳೂರು ವೃತ್ತ ಕಚೇರಿಯ ಅಧೀಕ್ಷಕ ಇಂಜಿನಿಯರ್ ಮಂಜಪ್ಪರವರ ನೇತೃತ್ವದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಗ್ರಾಹಕರು ಬರಪೂರ ಸಮಸ್ಯೆಗಳ ಪಟ್ಟಿಯನ್ನೇ ಮುಂದಿಟ್ಟರು.

ಕಡಬ ಅನುಗ್ರಹ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಗ್ರಾಹಕರು ಭಾರಿ ಸಂಖ್ಯೆಯಲ್ಲಿ ತಮ್ಮ ತಮ್ಮ ಭಾಗದ ಹತ್ತು ಹಲವು ವಿದ್ಯುತ್ ಸಮಸ್ಯೆಗಳನ್ನು ಮೆಸ್ಕಾಂ ಅಧಿಕಾರಿಗಳಿಗೆ ಮನವರಿಕೆ ಮಾಡಿದರು. ರೈತ ಈ ದೇಶದ ಬೆನ್ನೆಲುಬು ಎನ್ನುವ ನಮ್ಮ ಅಧಿಕಾರ ವರ್ಗ ರೈತನಿಗೆ ಬೇಕಾದಷ್ಟು ವಿದ್ಯುತನ್ನು ನೀಡಿ ಸಮೃದ್ದ ಕೃಷಿ ಮಾಡಲು ಅವಕಾಶ ನೀಡದೆ ಆತನ ಬೆನ್ನೆಲುಬು ಮುರಿಯುವ ಕೆಲಸವನ್ನು ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  ನಮ್ಮ ಮನೆಯ ಮಿಕ್ಸಿ ರನ್ನಾಗುವುದಿಲ್ಲ, ಪಂಪು ಚಾಲು ಆಗುವುದಿಲ್ಲ, ಕಳೆದ ಒಂದು ವಾರದಿಂದ ನೀರಾವರಿ ಪಂಪು ಚಾಲು ಆಗದೆ ತೋಟಗಳು ಒಣಗಿದೆ ಕುಡಿಯುವ ನೀರಿನ ಯೋಜನೆಯ ಪಂಪುಗಳು ವೋಲ್ಟೇಜ್ ಇಲ್ಲದೆ ನೀರು ಬರುತ್ತಿಲ್ಲ. ಒಂದು ವಾರದಿಂದ ಕುಡಿಯುವ ನೀರೇ ಇಲ್ಲ, ಬಾವಿಯ ನೀರನ್ನು ಸೇದಿ ನೀರು ಉಪಯೋಗಿಸಬೇಕು. ನಮ್ಮ ವಿದ್ಯುತ್ ಪರಿವರ್ತಕ ಕೆಟ್ಟು ಹೋಗಿದೆ. ಅದಕ್ಕೆ ಓವರ್‌ಲೋಡ್ ಆಗಿ ಟಿಸಿ ಕೆಟ್ಟು ಹೋಗಿ ದುರಸ್ಥಿಯಾಗಿಲ್ಲ. ಹಲವಾರು ವರ್ಷಗಳಿಂದ ಬೇಡಿಕೆ ಇಟ್ಟರು, ನಮ್ಮಲ್ಲಿ ಟಿಸಿಯಾಗಿಲ್ಲ. ಅನಿಯಮಿತ ವಿದ್ಯುತ್ ಪೂರೈಕೆಯಿಂದ ಮಕ್ಕಳ ಓದು ಬರಹಕ್ಕೆ ತೊಂದರೆಯಾಗುತ್ತಿದೆ. ನಮ್ಮಲ್ಲಿ ಇರುವ ವಿದ್ಯುತ್ ಲೈನ್‌ಗಳು ಹಳೆಯದಾಗಿವೆ. ಕಂಬಗಳು ಅಪಾಯಕಾರಿ ಸ್ಥಿತಿಯಲ್ಲಿವೆ. ನಮಗೆ ವಿದ್ಯುತ್ ಸರಿಯಾಗಿ ನೀಡುತ್ತಿಲ್ಲ, ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ದೂರವಾಣಿ ಕರೆ ಮಾಡಿದರೆ ಫೋನ್ ಎತ್ತುವವರೇ ಇಲ್ಲ. ನಮ್ಮ ಸಮಸ್ಯೆ ಹೇಳಿಕೊಂಡರೆ ಮೆಸ್ಕಾಂ ಅಧಿಕಾರಿಗಳಿಂದ ಉಢಾಫೆ ಉತ್ತರ ಬರುತ್ತದೆ. ಮುಂತಾದ ಸಮಸ್ಯೆಗಳ ಪಟ್ಟಿಯನ್ನೇ ಗ್ರಾಹಕರು ಅಧಿಕಾರಿಗಳ ಮುಂದಿಟ್ಟು ಅಧಿಕಾರಿಗಳನ್ನು ದಂಗು ಬಡಿಸಿದರು. ಆರೋಪಗಳ ಮಧ್ಯೆಯು ಕೆಲವು ಅಧಿಕಾರಿಗಳ ಬಗ್ಗೆ ಪ್ರಶಂಸೆಯ ಮಾತುಗಳು ಕೂಡ ಕೇಳಿಬಂತು.

ಧೀನ್‌ದಯಾಳ್ ಉಪಾಧ್ಯಾಯ ಯೋಜನೆಯಲ್ಲಿ ಬಡವರಿಗೆ ವಿದ್ಯುತ್ ಸಂಪರ್ಕ ನೀಡುವ ವಿಚಾರದಲ್ಲಿ ಈವರೆಗೆ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ, ಹಲವಾರು ಬಡವರ ಮನೆಗೆ ಇನ್ನೂ ವಿದ್ಯುತ್ ಸಂಪರ್ಕವಾಗಿಲ್ಲ. ಈ ಯೋಜನೆಯ ಬಗ್ಗೆ ಸಮೀಕ್ಷೆ ನಡೆಸಿ ಅಂದಾಜು ಪಟ್ಟಿ ತಯಾರಿಸಿದರೂ ಅದನ್ನು ಕಾರ್ಯಗತ ಮಾಡದೆ ಅನ್ಯಾಯ ಮಾಡಲಾಗಿದೆ. ಇಲಾಖೆಯವರು ಕೆಲವು ಪ್ರಭಾವಿ ವ್ಯಕ್ತಿಗಳಿಗೆ ಒಬ್ಬೊಬ್ಬರಿಗೆ ಬೇಕಾಗಿ ಒಂದೊಂದು ಟ್ರಾನ್ಸ್‌ಫಾರ್ಮರ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಇದರಿಂದಾಗಿ ಅರ್ಹರಿಗೆ ಅನ್ಯಾಯವಾಗಿದೆ. ಒಂದು ಟಿ.ಸಿ ಯಲ್ಲಿ ಅದರ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಪಂಪುಗಳನ್ನು ಒದಗಿಸುವಲ್ಲಿ ಅಧಿಕಾರಿಗಳು ಹಾಗೂ ವಿದ್ಯುತ್ ಗುತ್ತಿಗೆದಾರರು ಅತೀಯಾದ ಮುತುವರ್ಜಿ ವಹಿಸುತ್ತಾರೆ. ಆದರೆ ಹೆಚ್ಚುವರಿ ಸಾಮರ್ಥ್ಯದ ಟಿಸಿ ನಿರ್ಮಾಣ ಮಾಡಿ ಎಂದರೆ ಆ ಮಾತಿಗೆ ಕಿಮ್ಮತ್ತು ಸಿಗುತ್ತಿಲ್ಲ ಎಂದು ಆರೋಪಿಸಿದ ಗ್ರಾಹಕರು ಕೆಲವು ಸಲಹೆಗಳನ್ನು ಕೂಡ ನೀಡಿದರು. ಆಲಂಕಾರು ಭಾಗದ ವಿದ್ಯುತ್ ಸಮಸ್ಯೆ ನೀಗಬೇಕಾದರೆ ಅಲ್ಲಿ ಈಗಾಗಲೇ ಪ್ರಸ್ತಾಪ ಮಾಡಿರುವ 110 ಕೆ.ವಿ ವಿದ್ಯುತ್ ಸಬ್‌ಸ್ಟೇಶನ್‌ನ್ನು ತಕ್ಷಣ ಪ್ರಾರಂಭಿಸಬೇಕು. ಕಡಬ ಭಾಗದಿಂದ ಸುಬ್ರಹ್ಮಣ್ಯ ತನಕ ವಿದ್ಯುತ್ ಸರಬರಾಜು ಆಗುತ್ತಿದೆ. ಇದನ್ನು ಬಿಳಿನೆಲೆಯಿಂದ ಸಂಪರ್ಕ ಕಡಿತಗೊಳಿಸಿ ಬಿಳಿನೆಲೆ ಹಾಗೂ ಕೈಕಂಬ ಭಾಗವನ್ನು ಸುಬ್ರಹ್ಮಣ್ಯ ಸಬ್‌ಸ್ಟೇಶನ್‌ಗೆ ಸೇರ್ಪಡೆಗೊಳಿಸಬೇಕು, ಆಲಂಕಾರು ಭಾಗದ ವಿದ್ಯುತ್ ಸಮಸ್ಯೆ ನೀಗಿಸುವಲ್ಲಿ ಸವಣೂರು ಭಾಗದ ಸಬ್‌ಸ್ಟೇಶನ್‌ನಿಂದ ವಿದ್ಯುತ್ ಸರಬರಾಜು ಮಾಡಬೇಕು.

Also Read  ದ್ವಿಚಕ್ರ ವಾಹನ ಅಪಘಾತ - ಸವಾರ ಗಂಭೀರ

ನೀರಕಟ್ಟೆ ಹೈಡಲ್ ಪವರ್ ಸ್ಟೇಶನ್‌ನಿಂದ 33 ಕೆವಿ 2 ಸರ್ಕ್ಯೂಟ್ ಗುರುವಾಯನಕೆರೆಗೆ ಹೋಗಿರುತ್ತದೆ. ಇದರಲ್ಲಿ 1 ಫೀಡರ್‌ನಲ್ಲಿನ ವಿದ್ಯುತ್ ಪಡಕೊಂಡು, ನೀರಕಟ್ಟೆ ಸ್ಥಾವರದಿಂದ ನೆಲ್ಯಾಡಿ ಸ್ಥಾವರಕ್ಕೆ ವಿದ್ಯುತ್ ಸಂಪರ್ಕ ಕೊಟ್ಟಲ್ಲಿ ನೆಲ್ಯಾಡಿ ಕಡಬ, ಸವಣೂರು ಸುಬ್ರಹ್ಮಣ್ಯ ಈ ಭಾಗದಲ್ಲಿ ವಿದ್ಯುತ್ ಸುಧಾರಣೆಯಾಗಲಿದೆ. ಮತ್ತು ಕಡಬದಿಂದ ಪಂಜ ಮುಖಾಂತರ ನಿಂತಿಕಲ್ಲು ಏನೆಕಲ್ಲು ಮುಂತಾದ ಪ್ರದೇಶಕ್ಕೆ ಸರಬರಾಜು ಆಗುವ ವಿದ್ಯುತನ್ನು ಪಂಜ ತನಕ ಮಾತ್ರ ನೀಡಿ ಉಳಿದ ಭಾಗವನ್ನು ಬೆಳ್ಳಾರೆ ಸಬ್‌ಸ್ಟೇಶನ್‌ಗೆ ಸೇರ್ಪಡೆಗೊಳಿಸಬೇಕು, ರೈತರಿಗೆ ಹಾಗೂ ಜನಸಾಮಾನ್ಯರಿಗೆ, ವಿದ್ಯಾರ್ಥಿಗಳಿಗೆ ಸಮಯ ಹೊಂದುವ ರೀತಿಯಲ್ಲಿ ಸಮರ್ಪಕ ವಿದ್ಯುತನ್ನು ಹಂಚಿಕೆ ಮಾಡಿ ದಿನಕ್ಕೆ ಕನಿಷ್ಟ 4 ಗಂಟೆ 3ಫೇಸ್ ಗುಣಮಟ್ಟದ ವಿದ್ಯುತ್ ನೀಡಬೇಕು. ವಿದ್ಯಾರ್ಥಿಗಳ ಪರೀಕ್ಷೆ ಸಮಯದಲ್ಲಿ ಬೆಳಿಗ್ಗೆ ಮತ್ತು ಸಂಜೆ ಯಾವುದೇ ಕಾರಣಕ್ಕೂ ವಿದ್ಯುತ್ ಕಡಿತ ಮಾಡಬಾರದು. ಮುಂತಾದ ಬೇಡಿಕೆಗಳೊಂದಿಗೆ ನಮ್ಮೆಲ್ಲ ಸಮಸ್ಯೆಯನ್ನು 15 ದಿನಗಳೊಳಗೆ ಪರಿಹರಿಸಬೇಕು ಎಂದು ಗ್ರಾಹಕರು ಬಲವಾಗಿ ಆಗ್ರಹಿಸಬೇಕು. ಇದಕ್ಕೆ ಉತ್ತರಿಸಿದ ಮೆಸ್ಕಾಂ ಮಂಗಳೂರು ವೃತ್ತ ಕಚೇರಿ ಇಂಜಿನಿಯರ್ ಮಂಜಪ್ಪ ಮಾತನಾಡಿ ನಮ್ಮ ಮೆಸ್ಕಾಂ ಜನಸಂಪರ್ಕ ಸಭೆಗೆ ಜನಗಳೇ ಬರುತ್ತಿಲ್ಲ. ಆದರೆ ಕಡಬದಲ್ಲಿನ ಜನಸಂಖ್ಯೆಯನ್ನು ನೋಡಿದರೆ ಇಲ್ಲಿನ ಸಮಸ್ಯೆ ಎಷ್ಟು ಆಳವಾಗಿದೆ ಎನ್ನುವುದು ಅರ್ಥವಾಗಿದೆ. ನಿಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ಆದರೆ ನೀವು ನೀಡಿದ 15 ದಿನಗಳ ಗಡುವಿನಲ್ಲಿ ಎಲ್ಲವನ್ನು ಪರಿಹರಿಸಲು ಸಾಧ್ಯವಿಲ್ಲ. ಹಂತ ಹಂತವಾಗಿ ಆದ್ಯತೆ ನೆಲೆಯಲ್ಲಿ ಸಮಸ್ಯೆಗಳ ಪರಿಹಾರಕ್ಕೆ ನಮ್ಮ ಮೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಟಿಬದ್ದರಾಗಿದ್ದೇವೆ ಎಂದರು.

ಆಲಕಾರು 110 ಕೆವಿ ಸಬ್‌ಸ್ಟೇಶನ್ ಬಗ್ಗೆ ಮಾತನಾಡಿದ ಅಧೀಕ್ಷಕರು ಈ ಸಬ್‌ಸ್ಟೇಶನ್‌ನ ಅನುಷ್ಠಾನದ ಪ್ರಕ್ರಿಯೆ ನಡೆಯುತ್ತಿದೆ.  ಸರ್ವೇ ಕಾರ್ಯ ನಡೆದಿದೆ. ಪ್ರಸ್ತಾವಣೆ ಸರಕಾರದ ಮುಂದಿದೆ. ಇದರ ಎಲ್ಲಾ ಕಾರ್ಯಗಳು ಮುಗಿದು ಸಬ್‌ಸ್ಟೇಶನ್ ಅನುಷ್ಠಾನವಾಗಬೇಕಾದರೆ ಕನಿಷ್ಟ 2 ವರ್ಷಗಳ ಕಾಲಾವಕಾಶ ಬೇಕಾಗಿದೆ. ಬಿಳಿನೆಲೆ ಹಾಗೂ ಕೈಕಂಬಕ್ಕೆ ಕಡಬ ಭಾಗದಿಂದ ಸರಬರಾಜು ಆಗುವ ವಿದ್ಯುತನ್ನು ಕಡಿತಗೊಳಿಸಿ ಬಿಳಿನೆಲೆ ಮತ್ತು ಆ ಭಾಗವನ್ನು ಸುಬ್ರಹ್ಮಣ್ಯ ವಿಭಾಗಕ್ಕೆ ಸೇರಿಸಲು ಪ್ರಸ್ತಾವಣೆ ಸಲ್ಲಿಸಲಾಗುವುದು.

ನೀರಕಟ್ಟೆಯ 33 ಕೆವಿ ವಿದ್ಯುತ್ ಸ್ಥಾವರದಿಂದ ವಿದ್ಯುತನ್ನು ಈ ಭಾಗಕ್ಕೆ ಸರಬರಾಜು ಮಾಡುವ ನಿಟ್ಟಿನಲ್ಲಿ ಇಂದೇ ಅಧಿಕಾರಿಗಳಲ್ಲಿ ಚರ್ಚಿಸಿ ಸರ್ವೇ ಮಾಡಿ ಡಿಪಿಆರ್ ತಯಾರಿಸಲಾಗುವುದು. ಈ ಭಾಗದಲ್ಲಿ ಬರೋಬ್ಬರಿ 149 ವಿದ್ಯುತ್ ಪರಿವರ್ತಕಕ್ಕೆ ಬೇಡಿಕೆ ಬಂದಿದೆ. ಇದರ ಜೊತೆಗೆ ಎಚ್‌ಟಿ ಹಾಗೂ ಎಲ್‌ಟಿ ಲೈನ್‌ಗಳ ಬದಲಾವಣೆಗೂ ಅಹವಾಲು ಬಂದಿದೆ. ಇದನ್ನು ಆದ್ಯತೆ ನೆಲೆಯಲ್ಲಿ ವ್ಯವಸ್ಥೆ ಮಾಡಲಾಗುವುದು. ನಮ್ಮಲ್ಲಿ ಸಮಸ್ಯೆ ಪರಿಹರಿಸಲು ಹಣಕಾಸಿನ ಕೊರತೆ ಇಲ್ಲ. ಈಗಾಗಲೇ ಪುತ್ತೂರು ವಿಭಾಗಕ್ಕೆ 1.5 ಕೋಟಿ ರೂ. ಅನುದಾನ ಮಂಜೂರು ಆಗಿದೆ. ಇನ್ನೂ 1 ಕೋಟಿ ಅನುದಾನಕ್ಕಾಗಿ ಪ್ರಸ್ತಾವಣೆ ಸಲ್ಲಿಸಲಾಗುವುದು. ಎಂದು ಹೇಳಿದ ಅವರು ರಸ್ತೆ ಬದಿಯ ಅಪಾಯಕಾರಿ ವಿದ್ಯುತ್ ಕಂಬಗಳು ಅಪಾಯಕಾರಿ ಲೈನ್‌ಗಳನ್ನು ತಕ್ಷಣ ತೆರವುಗೊಳಿಸಬೇಕು ಹಾಗೂ ವಿದ್ಯುತ್ ಲೈನ್‌ಗೆ ತಾಗಿಕೊಂಡಿರುವ ಅಪಾಯಕಾರಿ ಮರ ಹಾಗೂ ರೆಂಬೆಗಳನ್ನು ತಕ್ಷಣ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸ್ಥಳದಲ್ಲಿದ್ದ ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಡಬ ಸಬ್‌ಸ್ಟೇಶನ್‌ನಲ್ಲಿ ಈಗ ಪ್ರಭಾರ ನೆಲೆಯಲ್ಲಿ ಸಹಾಯಕ ಇಂಜಿನಿಯರ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿಗೆ ಶಾಶ್ವತ ಕಾರ್ಯನಿರ್ವಾಹಕ ಇಂಜಿನಿಯರ್ ನೀಡಲಾಗುವುದು. ಮಾತ್ರವಲ್ಲ ಈಗಾಗಲೇ ಎಲ್ಲಾ ಶಾಖೆಗಳಿಗೆ ಸಿಬ್ಬಂದಿಗಳನ್ನು ನೇಮಕಗೊಳಿಸಲಾಗಿದೆ. ಕೆಲವು ಇಂಜಿನಿಯರ್‌ಗಳು ಸೇವಾ ಭಡ್ತಿ ಹೊಂದಿದ ತಕ್ಷಣ ಎಲ್ಲಾ ಶಾಖೆಗಳಿಗೆ ಅಗತ್ಯವಿರುವ ಕಾರ್ಯನಿರ್ವಾಹಕ ಇಂಜಿನಿಯರ್‌ಗಳನ್ನು ನೇಮಕಗೊಳಿಸಲಾಗುವುದು ಎಂದು ಹೇಳಿದರು. ಸರಕಾರದಿಂದ ದೊರೆಯುತ್ತಿದ್ದ ಎಲ್‌ಇಡಿ ಬಲ್ಬ್‌ಗಳ ಸರಬರಾಜು ನಿಂತುಹೋಗಿ ಕೆಲವು ತಿಂಗಳು ಕಳೆದು ಹೋಗಿದೆ. ಈ ಬಗ್ಗೆ ಗ್ರಾಹಕರು ಪ್ರಶ್ನಿಸಿದಾಗ ಉತ್ತರಿಸಿದ ಮಂಜಪ್ಪನವರು ಇನ್ನೂ ಎಲ್ಲಾ ಶಾಖೆಗಳಲ್ಲಿ ಎಲ್‌ಇಡಿ ಬಲ್ಬ್ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

Also Read  ಕಡಬ ಸಿಎ ಬ್ಯಾಂಕ್‍ನ ಕೊಣಾಜೆ ಶಾಖೆಗೆ ಮಠಂದೂರು ಭೇಟಿ

ವೇದಿಕೆಯಲ್ಲಿ ಜಿ.ಪಂ.ಸದಸ್ಯರಾದ ಪಿ.ಪಿ ವರ್ಗೀಸ್, ಆಶಾತಿಮ್ಮಪ್ಪ ಗೌಡ, ಪುತ್ತೂರು ವಿಭಾಗ ಕಚೇರಿಯ ಕಾರ್ಯನಿರ್ವಾಹಕ ಇಂಜಿನಿಯರ್ ನಾರಾಯಣ ಪೂಜಾರಿ, ಕಡಬ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ, ಕಡಬ ತಾಂತ್ರಿಕ ವಿಭಾಗದ ಸಹಾಯಕ ಇಂಜಿನಿಯರ್ ಸಜಿಕುಮಾರ್, ಕಡಬ ಶಾಖಾಧಿಕಾರಿ ಈರಣ ಗೌಡ, ನೆಲ್ಯಾಡಿ ಶಾಖಾಧಿಕಾರಿ ರಮೇಶ್, ಆಲಂಕಾರು ಶಾಖಾಧಿಕಾರಿ ಗೌತಮ್, ಬಿಳಿನೆಲೆ ಶಾಖಾಧಿಕಾರಿ ಅಭಿಷೇಕ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್, ಎಪಿಎಂಸಿ ಮಾಜಿ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ಸದಸ್ಯೆ ಪುಲಸ್ತ್ಯಾ ರೈ, ರಾಮಕೃಷ್ಣ ಹೊಳ್ಳಾರು, ತಾ.ಪಂ.ಸದಸ್ಯರಾದ ಆಶಾಲಕ್ಷ್ಮಣ್ ಗುಂಡ್ಯ, ಫಝಲ್ ಕೋಡಿಂಬಾಳ, ಪಿ.ವೈ ಕುಸುಮಾ, ರಾಮಕುಂಜ ಗ್ರಾ.ಪಂ.ಅಧ್ಯಕ್ಷ ಪ್ರಶಾಂತ್ ಆರ್.ಕೆ, ಕೊಯಿಲ ಗ್ರಾ.ಪಂ.ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ, ಬಿಳಿನೆಲೆ ಗ್ರಾ.ಪಂ.ಅಧ್ಯಕ್ಷೆ ಶಾರದಾ, ಐತ್ತೂರು ಗ್ರಾ.ಪಂ.ಅಧ್ಯಕ್ಷ ಸತೀಶ್ ಕೆ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿವಾಕರ ಗೌಡ ಶಿರಾಡಿ, ಕಾರ್ಯದರ್ಶಿ ಡೇನಿಸ್ ಫೆರ್ನಾಂಡೀಸ್, ಪ್ರಮುಖರಾದ ಹರೀಶ್ ರೈ ನಡುಮಜಲು, ಸುಂದರ ಗೌಡ ಬಳ್ಳೇರಿ, ಕೆ.ಎಂ ಹನೀಫ್, ಗಂಗಾಧರ ಶೆಟ್ಟಿ ನೆಲ್ಯಾಡಿ, ಕಮಲಾಕ್ಷ ರೈ ಮನವಳಿಕೆ, ರೋಯಿ ಅಬ್ರಹಾಂ, ಸುಬ್ರಹ್ಮಣ್ಯ ಭಟ್ ಕುಂತೂರು, ಹರೀಶ್ ಕೋಡಂದೂರು, ದೇವಯ್ಯ ಪನ್ಯಾಡಿ, ಉಮೇಶ್ ಶೆಟ್ಟಿ ಸಾಯಿರಾಂ, ಎನ್.ಎಸ್ ಭಟ್, ವರ್ಗೀಸ್ ಅಬ್ರಹಾಂ, ಗುರುಪ್ರಸಾದ್ ಪೆರಾಬೆ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು.

Also Read  ಇಂದಿನ ಕೊರೋನಾ ಅಪ್ಡೇಟ್ಸ್ ➤ ಕಡಬ, ಪುತ್ತೂರಿನಲ್ಲಿ 14 ಮಂದಿಗೆ ಕೊರೋನಾ ಪಾಸಿಟಿವ್

ಸಭೆಯಲ್ಲಿ ಪ್ರಮುಖವಾಗಿ ಕೇಳಿ ಬಂದ ಆರೋಪವೆಂದರೆ ಮೆಸ್ಕಾಂ ಸಲಹಾ ಸಮಿತಿಯ ಸದಸ್ಯರುಗಳನ್ನು ಮೆಸ್ಕಾಂ ಅಧಿಕಾರಿಗಳು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎನ್ನುವುದು. ಸಭೆಯಲ್ಲಿ ಭಾಗವಹಿಸಿದ್ದ 7-8 ಜನ ಸರಕಾರದಿಂದ ನೇಮಕವಾದ ಮೆಸ್ಕಾಂ ಸಲಹಾ ಸಮಿತಿ ಸದಸ್ಯರು ತಮ್ಮ ಅಸಾಮಾಧಾನವನ್ನು ಹೊರಹಾಕಿದರು. ನಾವು ಸಲಹಾ ಸಮಿತಿ ಸದಸ್ಯರಾದ ಬಳಿಕ ತಿಂಗಳಲ್ಲಿ ಕನಿಷ್ಟ ಒಂದು ಸಭೆಯಾದರೂ ನಡೆಯಬೇಕಿತ್ತು. ಆದರೆ ಈವರೆಗೆ ನಮ್ಮ ಉಪಸ್ಥಿತಿಯಲ್ಲಿ ನಡೆದಿದ್ದು ಕೇವಲ 2 ಸಭೆ. ಇವತ್ತಿನ ಜನಸಂಪರ್ಕ ಸಭೆಗೂ ಕೆಲವು ಸದಸ್ಯರಿಗೂ ಮಾಹಿತಿಯೇ ಇಲ್ಲ. ಹೀಗಾದರೆ ನಾವು ಜನಸಾಮಾನ್ಯರಿಗೆ ಉತ್ತರಿಸುವುದು ಹೇಗೆ. ಜನ ಸಿಕ್ಕಸಿಕ್ಕಲ್ಲಿ ವಿದ್ಯುತ್ ಸಮಸ್ಯೆಯ ಬಗ್ಗೆ ಮಾತನಾಡಿ ನಮ್ಮನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ನಾವು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾತನಾಡಲು ಹೋದರೆ ಸಮರ್ಪಕ ಉತ್ತರ ದೊರೆಯುತ್ತಿಲ್ಲ. ಸಭೆಗಳು ನಡೆದರೆ ಅದರಲ್ಲಿಯಾದರೂ ವಿದ್ಯುತ್ ಸಮಸ್ಯೆಯ ಬಗ್ಗೆ ಪ್ರಸ್ತಾವಣೆ ಮಾಡಬಹುದು. ಆದರೆ ಅಧಿಕಾರಿಗಳು ನಮ್ಮನ್ನು ಕರೆದು ಸರಿಯಾಗಿ ಸಭೆ ನಡೆಸದೇ ಅನ್ಯಾಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

error: Content is protected !!
Scroll to Top