(ನ್ಯೂಸ್ ಕಡಬ) newskadaba.com ಕಡಬ, ಜ.17. ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮರ್ಧಾಳ ಸಮೀಪದ ಬಂಟ್ರ ಗ್ರಾಮದ ಕಂಪ ನಿವಾಸಿ ಸುರೇಶ್ ಗೌಡ ಮತ್ತು ಲಲಿತಾ ದಂಪತಿಯ ಪುತ್ರ, ಮರ್ದಾಳ ಸೈಂಟ್ ಮೇರಿಸ್ ಪ್ರೌಢಶಾಲಾ 9ನೇ ತರಗತಿಯ ವಿದ್ಯಾರ್ಥಿ ರಾಜೇಶ್ ಅವರ ಚಿಕಿತ್ಸೆಗೆ ಜೇಸಿಐ ಕಡಬ ಕದಂಬ ಹಾಗೂ ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬುಧವಾರ ಆರ್ಥಿಕ ನೆರವು ಹಸ್ತಾಂತರಿಸಲಾಯಿತು.
ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಒಂದು ಹಂತದ ಚಿಕಿತ್ಸೆ ಪಡೆದು ಸ್ವಲ್ಪಮಟ್ಟಿಗೆ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡು ಮರ್ದಾಳದ ತನ್ನ ಮನೆಗೆ ಮರಳಿರುವ ಬಾಲಕನನ್ನು ಆತನ ಮನೆಯಲ್ಲಿ ಭೇಟಿ ಮಾಡಿದ ಜೇಸಿ ಸದಸ್ಯರು ಆತನಿಗೆ ಧೈರ್ಯ ತುಂಬಿ 10 ಸಾವಿರದ 50 ರೂ. ನಗದನ್ನು ಹಸ್ತಾಂತರಿಸಿದರು. ಕಡಬದ ಉದ್ಯಮಿ ದಯಾನಂದ ಪ್ರಭು ಅವರು ಬಾಲಕನ ಮನೆಗೆ ಕೊಡುಗೆಯಾಗಿ ನೀಡಿದ 25 ಕೆ.ಜಿ. ಅಕ್ಕಿಯನ್ನು ಇದೇ ಸಂದರ್ಭದಲ್ಲಿ ಬಾಲಕನ ಮನೆಗೆ ನೀಡಲಾಯಿತು. ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ನಾಗರಾಜ್ ಎನ್.ಕೆ., ಕಾರ್ಯದರ್ಶಿ ಅಶೋಕ್‌ಕುಮಾರ್ ಪಿ., ಉಪಾಧ್ಯಕ್ಷ ಶಿವಪ್ರಸಾದ್ ರೈ ಮೈಲೇರಿ, ನಿರ್ದೇಶಕರಾದ ಮಂಜುನಾಥ ಮರ್ದಾಳ, ದಿನೇಶ್ ಆಚಾರ್ಯ, ಫಯಾಝ್ ಕೆನರಾ, ಜೇಸಿ ಅಧ್ಯಕ್ಷ ವೆಂಕಟೇಶ್ ಪಾಡ್ಲ, ನಿಕಟ ಪೂರ್ವಾಧ್ಯಕ್ಷ ತಸ್ಲೀಂ ಮರ್ಧಾಳ, ಕಾರ್ಯದರ್ಶಿ ಮೋಹನ ಕೋಡಿಂಬಾಳ, ಪೂರ್ವಾಧ್ಯಕ್ಷರಾದ ಜಯರಾಮ ಗೌಡ ಆರ್ತಿಲ, ಪದಾಧಿಕಾರಿಗಳಾದ ರಮೇಶ್ ಕೊಠಾರಿ, ಜಯರಾಮ ಮೂರಾಜೆ ಉಪಸ್ಥಿತರಿದ್ದರು.