(ನ್ಯೂಸ್ ಕಡಬ) newskadaba.com ಕಡಬ, ಜ.14. ದೇಶ ಸುಭದ್ರವಾಗಿದ್ದರೆ ಮಾತ್ರ ದೇಶವಾಸಿಗಳು ಸುಖವಾಗಿರಬಹುದು. ದೇಶವನ್ನು ಮಾತೆಯೆಂದು ಪೂಜಿಸುವವರು ನಾವು. ದೇಶದ ಮೇಲಿನ ಪ್ರೀತಿಯೇ ನಮ್ಮ ಉಸಿರಾಗಿರಲಿ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ದ ಜಿಲ್ಲಾ ಕಾರ್ಯವಾಹ ಶ್ರೀನಿವಾಸ ಉಬರಡ್ಕ ಅವರು ಅಭಿಪ್ರಾಯಪಟ್ಟರು.
ಅವರು ರವಿವಾರ ಕಡಬದ ಸರಸ್ವತೀ ವಿದ್ಯಾಲಯದ ಸಭಾಂಗಣದಲ್ಲಿ ಆರೆಸ್ಸೆಸ್ ನ ಕಡಬ ಹಾಗೂ ಬಿಳಿನೆಲೆ ಮಂಡಲದ ವತಿಯಿಂದ ಜರಗಿದ ಮಕರ ಸಂಕ್ರಮಣ ಉತ್ಸವದಲ್ಲಿ ಪ್ರಧಾನ ಭಾಷಣ ಮಾಡಿದರು. ದೇಶ ಇಂದು ಬಾಹ್ಯ ಶತ್ರುಗಳ ಬಾಧೆಯೊಂದಿಗೆ ಆಂತರಿಕ ಶತ್ರುಗಳ ಕಿರುಕುಳವನ್ನು ಕೂಡ ಎದುರಿಸಬೇಕಾದ ಸಂಕ್ರಮಣ ಕಾಲದಲ್ಲಿದೆ. ಹೊರಗಿನ ಶತ್ರುಗಳನ್ನು ನಮ್ಮ ಸೇನೆಗಳು ಎದುರಿಸಲು ಸಮರ್ಥವಾಗಿವೆ. ಆದರೆ ದೇಶದೊಳಗಿನ ಶತ್ರುಗಳನ್ನು ಸದೆಬಡಿಯಲು ದೇಶವಾಸಿಗಳು ಜಾಗೃತರಾಗಬೇಕಿದೆ. ಹೊರಗಿನ ಶತ್ರುಗಳಿಗಿಂತ ದೇಶದೊಳಗಿನ ಶತ್ರುಗಳು ಹೆಚ್ಚು ಅಪಾಯಕಾರಿ. ನಮ್ಮ ಧಾರ್ಮಿಕ ನಂಬಿಕೆಗಳು ಹಾಗೂ ಶ್ರದ್ಧಾಕೇಂದ್ರಗಳ ಮೇಲೆ ನಿರಂತರ ದಾಳಿಗಳು ನಡೆಯುತ್ತಿದ್ದರೆ ಇನ್ನೊಂದೆಡೆ ವೈಚಾರಿಕ ಹಾಗೂ ರಾಜಕೀಯ ದಾಳಿಗಳು ದೇಶದ ಭದ್ರತೆಗೆ ಧಕ್ಕೆ ತರುತ್ತಿವೆ. ಅದೆಲ್ಲವನ್ನೂ ಮೆಟ್ಟಿ ನಿಲ್ಲಬೇಕಿದ್ದರೆ ದೇಶಪ್ರೇಮಿ ಸಂಘಟನೆಗಳು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಆರೆಸ್ಸೆಸ್ ತಳಮಟ್ಟದಿಂದ ಕೆಲಸ ನಿರ್ವಹಿಸುತ್ತಿದೆ. ಸಂಘದ ಕೆಲಸ ಇನ್ನಷ್ಟು ತೀವ್ರವಾಗಬೇಕಾದರೆ ಸಂಘದ ಶಾಖೆಗಳು ಇನ್ನಷ್ಟು ಹೆಚ್ಚಬೇಕು ಎಂದು ಅವರು ಸಲಹೆ ನೀಡಿದರು. ನಮ್ಮೊಳಗಿನ ಜಾತಿ ಭೇದಗಳನ್ನು ಬದಿಗೊತ್ತಿ ನಾವು ಹಿಂದುತ್ವದ ಅಡಿಯಲ್ಲಿ ಒಗ್ಗಟ್ಟಾಗಬೇಕಿದೆ. ಮೇಲು ಕೀಳು ಎನ್ನುವ ಭಾವ ತೊಲಗಿದಾಗ ಮಾತ್ರ ನಾವು ಸಂಘಟಿತರಾಗಲು ಸಾಧ್ಯ. ಸಮಾಜದಲ್ಲಿನ ಉಪೇಕ್ಷಿತ ಬಂಧುಗಳನ್ನು ಹಿಂದುತ್ವದ ಮುಖ್ಯವಾಹಿನಿಯ ಜೊತೆಗೆ ಕರೆದೊಯ್ಯುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ನುಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಸೈನಿಕ ಶಿವರಾಮ ಬಿಳಿನೆಲೆ ಅವರು ರಾಷ್ಟ್ರ ಪ್ರೇಮದ ಪಾಠ ಮಕ್ಕಳಿಗೆ ಸಿಕ್ಕಿದಾಗ ಮಾತ್ರ ಅವರು ಮುಂದೆ ದೇಶದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಸಾಧ್ಯ. ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವುದರೊಂದಿಗೆ ದೇಶದ ಅಭಿವೃದ್ಧಿಯಲ್ಲಿ ಕೈಜೋಡಿಸುವ ಮಾನಸಿಕತೆಯನ್ನು ಪ್ರೇರೇಪಣೆ ಮಾಡುವ ಮಾರ್ಗದರ್ಶನ ಸಿಗಬೇಕು ಎಂದು ಹೇಳಿ ಸಂಕ್ರಾಂತಿ ಹಬ್ಬವು ನಮ್ಮೆಲ್ಲರ ಕಷ್ಟ ಕೋಟಲೆಗಳನ್ನು ನೀಗಿಸಿ ಶುಭವನ್ನು ತರಲಿ ಎಂದು ಹಾರೈಸಿದರು. ಆರೆಸ್ಸೆಸ್ ಕಡಬ ಮಂಡಲ ಕಾರ್ಯವಾಹ ಮಾಧವ ಕೋಲ್ಪೆ ಸ್ವಾಗತಿಸಿ, ಪ್ರಸ್ತಾವನೆಗೈದರು. ದೀಪಕ್ ಅವರು ವೈಯಕ್ತಿಕ ಗೀತೆ ಹಾಗೂ ಪ್ರಕಾಶ್ ಎನ್.ಕೆ. ನಮಸ್ತೆ ಸದಾ ವತ್ಸಲೇ ಗೀತೆ ಹಾಡಿದರು. ಕಡಬ ಶಾಖಾ ಮುಖ್ಯ ಶಿಕ್ಷಕ ಜಯಂತ ವಿದ್ಯಾನಗರ ನಿರೂಪಿಸಿ, ಕಡಬ ಮಂಡಲ ಸಹ ಕಾರ್ಯವಾಹ ರಾಮಚಂದ್ರ ನೂತನ್ ವಂದಿಸಿದರು. ಸಭೆಗೂ ಮೊದಲು ಮಕರ ಸಂಕ್ರಮಣದ ಪ್ರಯುಕ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಡಬ ಹಾಗೂ ಬಿಳಿನೆಲೆ ಮಂಡಲದ ವತಿಯಿಂದ ಕಡಬ ಪೇಟೆಯಲ್ಲಿ ಗಣವೇಷಧಾರಿ ಕಾರ್ಯಕರ್ತರಿಂದ ಆಕರ್ಷಕ ಪಥಸಂಚಲನ ಜರಗಿತು.