(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜ.13. ಶನಿವಾರದಂದು ಬೆಳಿಗ್ಗೆ ಹಾಸನ ಸಮೀಪದ ಶಾಂತಿಗ್ರಾಮ ಕೃಷಿ ಕಾಲೇಜಿನ ಸಮೀಪ ನಡೆದ ಐರಾವತ ಬಸ್ ಅಪಘಾತದಲ್ಲಿ ಮೃತಪಟ್ಟ ಎಂಟು ಮಂದಿಯಲ್ಲಿ ಒಂದೇ ಕುಟುಂಬದ ಮೂವರು ಸೇರಿದ್ದಾರೆ.
ಮೃತರನ್ನು ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಸಮೀಪದ ಗಂಡಿಬಾಗಿಲು ನಿವಾಸಿಗಳಾದ ಬೆಂಗಳೂರಿನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಡಯಾನಾ, ಸೋನಿಯಾ ಹಾಗೂ ಬಿಜು ಎಂದು ಗುರುತಿಸಲಾಗಿದೆ. ಇನ್ನೋರ್ವ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದೇ ಕುಟುಂಬದ ಇವರು ರಾತ್ರಿ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಸಂಸ್ಥೆಯ ನತದೃಷ್ಟ ಐರಾವತ ಬಸ್ ಗೆ ಹತ್ತಿದ್ದರು. ಆದರೆ ಬಸ್ ಹಾಸನ ತಲುಪುವಷ್ಟರಲ್ಲಿ ನಿದ್ದೆಯ ಮಂಪರಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಗೆ ಢಿಕ್ಕಿ ಹೊಡೆದು ಪಲ್ಟಿಯಾಗಿ ಮೂವರು ಮೃತಪಟ್ಟಿದ್ದರಿಂದ ಇಡೀ ಗಂಡಿಬಾಗಿಲು ಪರಿಸರದಲ್ಲಿ ಸ್ಮಶಾನ ಮೌನ ಆವರಿಸಿದೆ.
ಇದೀಗ ಮೃತದೇಹಗಳನ್ನು ಹಾಸನದಿಂದ ಹುಟ್ಟೂರಿಗೆ ತರಲಾಗುತ್ತಿದೆ.