ಕಡಬದಲ್ಲಿ ಕಾಡಾನೆ ಸ್ಥಳಾಂತರ ಮಾಡುವ ವೇಳೆ ಅಧಿಕಾರಿಗಳೊಂದಿಗೆ ವಾಗ್ವಾದ ಪ್ರಕರಣ ಮೂವರಿಗೆ ನಿರೀಕ್ಷಣಾ ಜಾಮೀನು ಮಂಜೂರುಗೊಳಿಸಿದ ನ್ಯಾಯಾಲಯ

(ನ್ಯೂಸ್ ಕಡಬ) newskadaba.com. ಕಡಬ, ಏ.20. ಕಾಡಾನೆ ಸೆರೆ ಹಿಡಿಯುವ ವೇಳೆ ತಂಡವೊಂದು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿ ಅರಣ್ಯ, ಪೊಲೀಸ್ ಇಲಾಖಾ ವಾಹನಗಳಿಗೆ ಕಲ್ಲು ತೂರಾಟ ಮಾಡಿ ಹಾನಿ ಉಂಟು ಮಾಡಿದ್ದಲ್ಲದೆ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆಗೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಮೂವರು ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಘಟನೆಗೆ ಸಂಬಂಧಿಸಿದಂತೆ ಉಮೇಶ್ ಕಮರ್‌ಕಜೆ, ರಾಜೇಶ್ ಕನಡ ಕಮರ್‌ಕಜೆ, ಜನಾರ್ದನ ರೈ ಕೊಲ್ಯ, ಕೋಕಿಲ ಕಮರ್‌ಕಜೆ, ತೀರ್ಥಕುಮಾರ ಕೋಲ್ಪೆ, ಗಂಗಾಧರ ಗೌಡ ಬಾರ್ಯ ಸಿರಿಬಾಗಿಲು ಮತ್ತು ಅಜಿತ್ ಕುಮಾರ್ ರೆಂಜಾಳ ಎಂಬವರನ್ನು ಕಡಬ ಪೊಲೀಸರು ಬಂಧಿಸಿದ್ದರು.ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳನ್ನು ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆಗೊಳಿಸಿತ್ತು.ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವರಾಮ, ರಕ್ಷಿತ್ ಬಿ ಮತ್ತು ಉದಯ ಎಂಬವರಿಗೆ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.ಆರೋಪಿಗಳ ಪರ ವಕೀಲ ಮಹೇಶ್ ಕಜೆ ಅವರು ವಾದಿಸಿದ್ದರು.

ರೆಂಜಿಲಾಡಿ ನೈಲದಲ್ಲಿ ಫೆ.20ರಂದು ಬೆಳ್ಳಂಬೆಳಗ್ಗೆ ಕಾಡಾನೆಯೊಂದು ದಾಳಿ ನಡೆಸಿ ಪೇರಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ರಂಜಿತಾ ರೈ ಮತ್ತು ನೈಲ ರಮೇಶ್ ರೈ ಎಂಬವರು ಮೃತಪಟ್ಟಿದ್ದರು.ಫೆ.23ರಂದು ರಾತ್ರಿ ಕೊಂಬಾರು ಗ್ರಾಮದ ಮಂಡೆಕರ ಸಮೀಪದ ಮೂಜೂರು ಅರಣ್ಯ ಪ್ರದೇಶದಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ ಕಾಡಾನೆಯನ್ನು ಸೆರೆ ಹಿಡಿಯಲಾಗಿತ್ತು.ಅದೇ ದಿನ  ಕಾಡಾನೆಯನ್ನು ದುಬಾರೆ ಆನೆ ಬಿಡಾರಕ್ಕೆ ಬಿಟ್ಟು ಬರಲು ಕಾರ್ಯಾಚರಣಾ ತಂಡ ಮುಂದಾದಾಗ ನಾಗರಿಕರ ಗುಂಪೊಂದು ಕಾಡಾನೆಯಿದ್ದ ಲಾರಿಯನ್ನು ತಡೆಹಿಡಿದು ನಿಲ್ಲಿಸಿ, ಹಿಡಿದಿರುವ ಆನೆಯನ್ನು ಇಲ್ಲಿಯೇ ನಿಲ್ಲಿಸಿ ಇತರ ಕಾಡಾನೆಗಳನ್ನೂ ಸೆರೆ ಹಿಡಿದು ಒಟ್ಟಿಗೇ ಎಲ್ಲಾ ಆನೆಗಳನ್ನು ಕೊಂಡು ಹೋಗಬೇಕು ಎಂದು ಹೇಳಿ ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದಿದ್ದರು.

error: Content is protected !!

Join the Group

Join WhatsApp Group