(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ, ಜ.08. ಚಳಿಗಾಲ ಬಂತೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಎಲ್ಲರೂ ಚಳಿಗಾಲವನ್ನು ಇಷ್ಟಪಡುವವರೆ. ಮಳೆಗಾಲ ಮುಗಿದು ಚಳಿಗಾಲ ಶುರುವಾಗುತ್ತಿದ್ದಂತೆ ಬಣ್ಣ ಬಣ್ಣದ ಸ್ವೆಟರ್ಗಳು ವಾರ್ಡ್ರೋಬ್ನಲ್ಲಿ ತುಂಬಿ ಹೋಗಿರುತ್ತದೆ. ಚಳಿಗಾಲ ಆರಂಭವಾಗುತ್ತಿದ್ದಂತೆ ವಾತಾವರಣದಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗಿ, ಅದು ನಮ್ಮ ದೇಹದ ಚರ್ಮಕ್ಕೆ ಬಹಳ ತೊಂದರೆ ನೀಡುವ ಸಾಧ್ಯತೆ ಇದೆ. ಚಳಿಯಾದ ಗಾಳಿ ಮತ್ತು ಗಾಳಿಯಲ್ಲಿ ಕಡಿಮೆಯಾದ ನೀರಿನಂಶದಿಂದಾಗಿ, ಒಣಗಾಳಿಯಿಂದ ಚರ್ಮಕ್ಕೆ ಬಹಳ ತೊಂದರೆ ಆಗುವ ಸಾಧ್ಯತೆ ಇರುತ್ತದೆ. ಗಾಳಿಯಲ್ಲಿ ತೇವಾಂಶ ಕಡಿಮೆ ಇರುವ ಕಾರಣ ಒಣಗಾಳಿ ದೇಹದಿಂದ ತೇವಾಂಶವನ್ನು ಹೀರಿ ಒಣಚರ್ಮ ಉಂಟಾಗುವಂತೆ ಮಾಡುತ್ತದೆ. ಇದರಿಂದಾಗಿ ಚರ್ಮದಲ್ಲಿ ಬಿರುಕು ಬಿಟ್ಟು, ಚರ್ಮದಲ್ಲಿ ತುರಿಕೆ ಉಂಟಾಗಬಹುದು ಮತ್ತು ಚರ್ಮದ ನಿಜವಾದ ಬಣ್ಣ (ಹೊಳಪು) ಇಲ್ಲವಾಗುತ್ತದೆ. ಅದೆ ರೀತಿ ಚಳಿಗಾಲದಲ್ಲಿ ಬಾಹ್ಯ ಉಷ್ಣತೆ ಕಡಿಮೆಯಾದಾಗ ದೇಹದಲ್ಲಿನ ರಕ್ತನಾಳಗಳು ಸಂಕುಚಿತಗೊಂಡು, ದೇಹದ ಎಲ್ಲಾ ಭಾಗಗಳಿಗೂ ರಕ್ತದ ಪುರೈಕೆ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದಲೇ ಚಳಿಗಾಲದಲ್ಲಿ ದೇಹಕ್ಕಾದ ಗಾಯ ಒಣಗುವುದು ಬಹಳ ನಿಧಾನ. ಬೇಸಗೆಯಲ್ಲಿ ವಾರದೊಳಗೆ ವಾಸಿಯಾಗುವ ಗಾಯ, ಚಳಿಗಾಲದಲ್ಲಿ ಮೂರು ವಾರ ಕಳೆದರೂ ವಾಸಿಯಾಗದು. ಚಳಿಗಾಲದಲ್ಲಿ ವಾತಾವರಣದ ಉಷ್ಣತೆ ಕಡಿಮೆ ಇರುವುದರಿಂದ ಬೆವರುವುದು ಕಡಿಮೆ. ಆದರೆ ದೇಹದ ತೇವಾಂಶವನ್ನು ಒಣಗಾಳಿ ಹೀರುವುದರಿಂದ, ದೇಹ ಬೇಗ ನಿರ್ಜಲೀಕರಣವಾಗುವ ಸಾಧ್ಯತೆ ಹೆಚ್ಚು. ಈ ಕಾರಣದಿಂದಲೇ ಚಳಿಗಾಲದಲ್ಲಿ ಹೆಚ್ಚು ಹೆಚ್ಚು ನೀರು ಮತ್ತು ದ್ರವಾಹಾರ ಸೇವನೆ ಅತೀ ಅಗತ್ಯ.
ಏನು ಮಾಡಬೇಕು?
1. ಸಾಕಷ್ಟು ನೀರು ಕುಡಿಯಬೇಕು. ಚರ್ಮದ ಕಾಂತಿ ಮತ್ತು ಹೊಳಪನ್ನು ಹೆಚ್ಚಿಸಲು ದಿನವೊಂದರಲ್ಲಿ ಕನಿಷ್ಠ 2 ಲೀಟರ್ ನೀರನ್ನು ಚಳಿಗಾಲದಲ್ಲಿ ಸೇವಿಸಬೇಕು. ಚಳಿಗಾಲದಲ್ಲಿ ಸಾಕಷ್ಟು ಉಗುರು ಬೆಚ್ಚಗಿನ ನೀರು ಸೇವನೆ ಅತೀ ಅಗತ್ಯ. ಉಗುರು ಬೆಚ್ಚಗಿನ ನೀರು ಸೇವಿಸುವುದರಿಂದ ಗಂಟಲು ಮತ್ತು ಮೂಗಿನೊಳಗಿನ ಗಾಳಿಯ ಮಾರ್ಗ ಸರಾಗವಾಗಿ ತೆರೆದುಕೊಂಡು, ಉಸಿರಾಟ ಸರಾಗವಾಗುವಂತೆ ಮಾಡುತ್ತದೆ. ಅದೇ ರೀತಿ ದೇಹದೊಳಗೆ ವಿಷಕಾರಿ ವಸ್ತುಗಳನ್ನು ಮೂತ್ರದ ಮುಖಾಂತರ ವಿಸರ್ಜಿಸಿ, ಚರ್ಮಕ್ಕೆ ನೈಜ ಕಾಂತಿ ಮತ್ತು ಹೊಳಪನ್ನು ನೀಡುತ್ತದೆ.
2. ಚಳಿಗಾಲದಲ್ಲಿ ಚರ್ಮ ಒಣಗಿ ಸುಕ್ಕುಗಟ್ಟುವುದನ್ನು ತಡೆಯಲು ಚರ್ಮದ ತೇವಾಂಶವನ್ನು ಹೆಚ್ಚಿಸುವ ಕ್ರೀಮ್ಗಳನ್ನು ಮತ್ತು ಮುಲಾಮ್ಗಳನ್ನು ಬಳಸಬಹುದು. ಈ ರೀತಿಯ ಕ್ರೀಮ್ಗಳನ್ನು ಬಳಸುವುದರಿಂದ ಚರ್ಮದ ಆದ್ರತೆ ಅಥವಾ ತೇವ ಹೆಚ್ಚಾಗಿ ಚರ್ಮ ಒಣಗದಂತೆ ತಡೆಯುತ್ತದೆ. ಮುಖ, ಕೈಕಾಲುಗಳಿಗೆ ವ್ಯಾಸಲೀನ್ ಹಚ್ಚಬೇಕು. ಮಾರುಕಟ್ಟೆಯಲ್ಲಿ ಉಚಿತವಾಗಿ ಸಿಗುವ ಆಲ್ಕೋಹಾಲ್ ಹೊಂದಿರುವ ದ್ರಾವಣಗಳನ್ನು ಬಳಸಲೇ ಬಾರದು. ಚಳಿಗಾಲದಲ್ಲಿ ಅತೀ ಕಡಿಮೆ ಸೌಂದರ್ಯ ವರ್ಧಕಗಳಾದ ಮತ್ತು ಕೇಶಕಾಂತಿ ವರ್ಧಕ ಸಾಧನಗಳನ್ನು ಬಳಸಬೇಕು. ಅತೀ ಅನಿವಾರ್ಯವಾದಲ್ಲಿ ಮಾತ್ರ ಇವುಗಳನ್ನು ಬಳಸಬೇಕು. ನೈಸರ್ಗಿಕ ಸೌಂದರ್ಯವರ್ಧಕಗಳಾದ ಬೆಣ್ಣೆ, ತುಪ್ಪ ಮುಂತಾದುವುಗಳನ್ನು ಬಳಸಬೇಕು. ವಿಟಮಿನ್ ‘ಎ’ ಮತ್ತು ‘ಇ’ ಇರುವ ಆಲ್ಕೋಹಾಲ್ ರಹಿತ ಕ್ರೀಮ್ಗಳನ್ನು ಬಳಸ¨ಹುದು.
3. ಜೀವನ ಶೈಲಿ ಬದಲಿಸಿಕೊಂಡು ಮದ್ಯಪಾನ ಮತ್ತು ಧೂಮಪಾನವನ್ನು ವರ್ಜಿಸಬೇಕು. ಮದ್ಯಪಾನದಿಂದ ನಿರ್ಜಲೀಕರಣವಾಗುತ್ತದೆ ಮತ್ತು ಧೂಮಪಾನದಿಂದ ಬಾಯಿ ಒಣಗುತ್ತದೆ. ಅದೇ ರೀತಿ ಜಂಕ್ ಆಹಾರಗಳನ್ನು ಕೂಡಾ ವರ್ಜಿಸತಕ್ಕದು. ಇವೆಲ್ಲವೂ ಚರ್ಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸಾಕಷ್ಟು ಸಾತ್ವಿಕ ಆಹಾರ, ಎಣ್ಣೆ ಮತ್ತು ಕೊಬ್ಬು ರಹಿತ ಆಹಾರವನ್ನು ಸೇವಿಸಬೇಕು. ನೀರಿನ ಅಂಶ ಜಾಸ್ತಿ ಇರುವ ಹಣ್ಣುಗಳಾದ ಕಲ್ಲಂಗಡಿ, ಪಪ್ಪಾಯ, ಕಿತ್ತಳೆ, ಮುಸುಂಬಿ ಮುಂತಾದವುಗಳನ್ನು ಹೆಚ್ಚು ಸೇವಿಸಬೇಕು. ಅದೇ ರೀತಿ ಹಸಿ ತರಕಾರಿ, ಸೊಪ್ಪು, ಕಾಯಿಪಲ್ಯಗಳನ್ನು ಹೆಚ್ಚು ಸೇವಿಸುವುದು ಉತ್ತಮ. ಇದರಿಂದ ದೇಹದ ಆರೋಗ್ಯದ ಜೊತೆಗೆ ಚರ್ಮದ ಕಾಂತಿಯೂ ಹೆಚ್ಚುತ್ತದೆ.
4. ತುಟಿಯಲ್ಲಿ ಬಿರುಕು ಬಿಡುವುದು ಚಳಿಗಾಲದಲ್ಲಿ ಸರ್ವೆ ಸಾಮಾನ್ಯ. ಸಾಕಷ್ಟು ಪೆಟ್ರೋಲಿಯಂ ಜೆಲ್ಲಿ ಅಥವಾ ವ್ಯಾಸಲೀನ್ ಬಳಸಿ ತುಟಿಯಲ್ಲಿ ರಕ್ತ ಒಸರದಂತೆ ನೋಡಿಕೊಳ್ಳಬೇಕು.
5. ಚಳಿಗಾಲದಲ್ಲಿ ಒಣಹವೆ ಮತ್ತು ಚಳಿಗಾಳಿಯಿಂದಾಗಿ ತಲೆಯ ಕೂದಲುಗಳು ಬಿರುಕು ಬಿಡುವ ಸಾಧ್ಯತೆಯೂ ಇದೆ. ಮತ್ತು ತಲೆಯಲ್ಲಿ ಹೊಟ್ಟು ಉಂಟಾಗುವ ಸಾಧ್ಯತೆ ಇರುತ್ತದೆ. ತುರಿಕೆ ಮತ್ತು ಬಿರುಕು ಬರುವ ಸಾಧ್ಯತೆಯೂ ಇದೆ. ಸಾಕಷ್ಟು ಎಣ್ಣೆ ಹಚ್ಚಿ ಕೂದಲಿನ ತೇವ ಆರದಂತೆ ನೋಡಿಕೊಳ್ಳಬೇಕು. ನೈಸರ್ಗಿಕ ಎಣ್ಣೆಗಳು ಅಥವಾ ಕೂದಲಿನ ತೇವಾಂಶ ಹೆಚ್ಚಿಸುವ ತೈಲಗಳನ್ನು ವೈದ್ಯರ ಸಲಹೆಯಂತೆ ಬಳಸಬೇಕು.
6. ಚಳಿಗಾಲದಲ್ಲಿ ತುಂಬಾ ಬಿಸಿಯಾದ ನೀರಿನಿಂದ ಸ್ನಾನ ಮಾಡಬಾರದು. ಈ ರೀತಿ ಮಾಡಿದರೆ ಚರ್ಮದಲ್ಲಿನ ತೇವಾಂಶ ಮತ್ತಷ್ಟು ಕಡಿಮೆಯಾಗಬಹುದು. ಮತ್ತು ದೀರ್ಘಹೊತ್ತಿನವರೆಗೆ ಬಿಸಿಯಾದ ನೀರಿನಲ್ಲಿ ಸ್ನಾನ ಮಾಡಲೇಬಾರದು.
7. ಚಳಿಗಾಲದಲ್ಲಿ ಮೈಮುಚ್ಚುವ ಬಟ್ಟೆಗಳನ್ನು ಧರಿಸಬೇಕು. ಒಣಗಾಳಿಯಿಂದಾಗಿ ಚರ್ಮದ ತೇವಾಂಶ ಆರಿ ಹೋಗದಂತೆ ತಡೆಯಲು ಉದ್ದತೋಳಿನ ಅಂಗಿ ಮತ್ತು ಕಾಲುಚೀಲ ಧರಿಸಿದರೆ ಉತ್ತಮ.
8. ಚಳಿಗಾಲದಲ್ಲಿ ಸೋಪಿನ ಬಳಕೆಯನ್ನು ಕಡಿಮೆ ಮಾಡಿದಲ್ಲಿ ಉತ್ತಮ. ಹೆಚ್ಚಿನ ಎಲ್ಲಾ ಸೋಪುಗಳು ಚರ್ಮದಲ್ಲಿನ ತೇವಾಂಶವನ್ನು ಹೀರಿ ಚರ್ಮದ ಹೊಳಪನ್ನು ಕುಗ್ಗಿಸುತ್ತದೆ ಮತ್ತು ಪರೋಕ್ಷವಾಗಿ ಚರ್ಮ ಬಿರುಕು ಬಿಡಲು ಕಾರಣವಾಗುತ್ತದೆ. ಕಡ್ಲೆಹಿಟ್ಟಿನ ದ್ರಾವಣವನ್ನು ಸೋಪಿನ ಬದಲಾಗಿ ಬಳಸುವುದರಲ್ಲಿಯೆ ಜಾಣತನ ಅಡಗಿದೆ.
ಕೊನೆಯ ಮಾತು: ‘ಕಾಲಕ್ಕೆ ತಕ್ಕ ಕೋಲ’ ಎಂಬುದಾಗಿ ನಮ್ಮ ಹಿರಿಯರು ಹೇಳಿದ ಮಾತು. ಅದೇ ದಿಟ್ಟಿನಲ್ಲಿ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕಾಲಕ್ಕೆ ತಕ್ಕಂತೆ ಕೋಲ (ವೇಷ)ದ ಜೊತೆಯಲ್ಲಿ, ಕಾಲಕ್ಕೆ ತಕ್ಕಂತೆ ನಮ್ಮ ಜೀವನ ಶೈಲಿ ಮತ್ತು ಆಹಾರ ಪದ್ದತಿಯಲ್ಲೂ ಮಾರ್ಪಾಡು ಮಾಡಿಕೊಂಡಲ್ಲಿ ನೂರು ಕಾಲ ಸುಖವಾಗಿ ಬಾಳಬಹುದು.
ಡಾ| ಮುರಲೀ ಮೋಹನ್ ಚೂಂತಾರು