ವಿಟ್ಲ: ಆಸ್ತಿಗಾಗಿ ತಾಯಿಗೆ ಹಲ್ಲೆ ನಡೆಸಿ ಪರಾರಿಯಾದ ಮಗ ➤ ದೂರು ದಾಖಲು

(ನ್ಯೂಸ್ ಕಡಬ) newskadaba.com ವಿಟ್ಲ, ಮಾ. 26. ಆಸ್ತಿಯಲ್ಲಿ ಪಾಲುಕೊಡುವಂತೆ ಒತ್ತಾಯಿಸಿ ಹೆತ್ತ ತಾಯಿಗೆ ಬೆದರಿಸಿ ಹಲ್ಲೆ ನಡೆಸಿ ಮಗ ಪರಾರಿಯಾದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹಲ್ಲೆಗೊಳಗಾದವರನ್ನು ಇಡ್ಕಿದು ಗ್ರಾಮದ ನಾರಾಯಣ ಗೌಡರ ಪತ್ನಿ ರೋಹಿಣಿ ಎಂದು ಗುರುತಿಸಲಾಗಿದೆ. ಇವರ ಹಿರಿಯ ಮಗ ಚೇತನ್‌ ಕುಮಾರ್ ಎಂಬಾತ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ಮನೆಯ ಅಡಿಗೆಕೋಣೆಯಿಂದ ಅಮ್ಮ ಅಳುವ ಶಬ್ದ ಕೇಳಿಬರುತ್ತಿದ್ದ ಹಿನ್ನೆಲೆ, ಅಡುಗೆ ಕೋಣೆಗೆ ತೆರಳಿ ನೋಡುವಾಗ ಅಲ್ಲಿ ತಾಯಿ ರೋಹಿಣಿಯನ್ನು ಚೇತನ್‌ ಅವರ ತಮ್ಮ ಸಚಿನ್‌ ಎಂಬಾತನು ತಲೆ ಕೂದಲು ಹಿಡಿದು, ಮುಖಕ್ಕೆ ಕೈಯಿಂದ ಹೊಡೆಯುತ್ತಾ, ನನಗೆ ಜಾಗದಲ್ಲಿ ಪಾಲುಕೊಡಿ, ಇಲ್ಲದಿದ್ದರೆ ನಿಮ್ಮನ್ನು ಬದುಕಲು ಬಿಡುವುದಿಲ್ಲ ಎಂದು ಹೇಳುತ್ತಿದ್ದನು. ಇದನ್ನು ತಡೆಯಲು ಚೇತನ್‌ ಮುಂದಾದಾಗ ಸಚಿನ್ ಅಲ್ಲೇ ಇದ್ದ ಚೂರಿಯಿಂದ ಅಮ್ಮನಿಗೆ ಚುಚ್ಚಲು ಮುಂದಾಗಿದ್ದಾನೆ. ಬಳಿಕ ಚೇತನ್‌ ಚೂರಿಯನ್ನು ಕಸಿಯುತ್ತಿದ್ದಂತೆ ಅಡುಗೆ ಕೋಣೆಯಲ್ಲಿದ್ದ ಕಲ್ಲನ್ನು ತೆಗೆದು ಚೇತನ್‌ ತಲೆಯ ಹಿಂಬದಿಗೆ ಹೊಡೆದು ಕೈಗೆ ಕಚ್ಚಿ ಓಡಿಹೋಗಿದ್ದಾನೆ ಎನ್ನಲಾಗಿದೆ. ಗಾಯಗೊಂಡ ತಾಯಿ ರೋಹಿಣಿ ಹಾಗೂ ಚೇತನ್‌ರವರನ್ನು ವಿಟ್ಲ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಕುಮಾರಧಾರ ಸ್ನಾನಘಟ್ಟದಲ್ಲಿ ನೀರಿನ ಮಟ್ಟ ಇಂದು ಕೊಂಚ ಇಳಿಮುಖ

error: Content is protected !!
Scroll to Top