ಮಂಗಳೂರು: ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಣೆ ► ವಾರದೊಳಗೆ 31,800 ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್: ಉನ್ನತ ಶಿಕ್ಷಣ ಸಚಿವ ರಾಯರೆಡ್ಡಿ

(ನ್ಯೂಸ್ ಕಡಬ) newskadaba.com
ಮಂಗಳೂರು, ಜ.07. ರಾಜ್ಯದಾದ್ಯಂತ 412 ಸರಕಾರಿ ಪದವಿ, 85 ಪಾಲಿಟೆಕ್ನಿಕ್ ಮತ್ತು 14 ಸರಕಾರಿ ಇಂಜಿನಿಯರ್ ಕಾಲೇಜುಗಳ ಒಟ್ಟು 31,800 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಒಂದು ವಾರದೊಳಗೆ ಉಚಿತ ಲ್ಯಾಪ್‍ಟಾಪ್ ವಿತರಿಸಲಾಗುವುದು ಎಂದು  ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.

ಅವರು ನಗರದ ಪುರಭವನದಲ್ಲಿ 2016-17 ಸಾಲಿನ ಎಸ್.ಸಿ.ಪಿ./ಟಿ.ಎಸ್.ಪಿ. ಯೋಜನೆಯ ಅಡಿಯಲ್ಲಿ ದ.ಕ ಜಿಲ್ಲೆಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸರಕಾರಿ ಪಾಲಿಟೆಕ್ನಿಕ್‍ಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿ, ಎಲ್ಲರಿಗೂ ಸಮಪಾಲು ಸಿಗಬೇಕು. ಅದಕ್ಕಾಗಿ ಮುಂದಿನ ಮಾರ್ಚ್ ಒಳಗೆ 1 ಲಕ್ಷ 50 ಸಾವಿರ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಲಾಗುವುದು. ದ.ಕ ಜಿಲ್ಲೆಯಲ್ಲಿ 7,900 ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ  ನೀಡಲಾಗುವುದು. ಈ ಯೋಜನೆಗೆ ಮುಖ್ಯಮಂತ್ರಿಗಳು 227 ಕೋಟಿ ರೂಪಾಯಿನ್ನು ಮೀಸಲಿಟ್ಟಿದಾರೆ ಎಂದು ಸಚಿವರು ಹೇಳಿದರು. ಉನ್ನತ ಶಿಕ್ಷಣದಲ್ಲಿ ಹೆಚ್ಚು ವಿದ್ಯಾರ್ಜನೆಯಾಗಬೇಕು ಮತ್ತು ಜ್ಞಾನದ ಸಂಗ್ರಹವಾಗಬೇಕು. ಗ್ರಂಥಾಲಯದ ಪುಸ್ತಕದಿಂದ ವಿದ್ಯಾರ್ಜನೆ ಸಾಲದು, ಇವತ್ತು ವಿದ್ಯಾರ್ಥಿಗಳು ಅಂತರ್ಜಾಲದ ಮೂಲಕ ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳಬೇಕಾಗಿದೆ. ಮಕ್ಕಳಿಗೆ ಭವಿಷ್ಯಕ್ಕಾಗಿ ಲ್ಯಾಪ್‍ಟಾಪ್ ಕೊಡುತ್ತಿದ್ದೇವೆ. ನಮ್ಮ ದೇಶದಲ್ಲಿ 100ಕ್ಕೆ 24 ರಷ್ಟು ಮಂದಿ ಮಾತ್ರ ಪದವೀಧರರಾಗುತ್ತಿದ್ದಾರೆ. ಕರ್ನಾಟಕದಲ್ಲಿ ಶೇಕಡಾ 27.3 ರಷ್ಟು ಮಂದಿ ಪದವೀಧರರಾಗುತ್ತಿದಾರೆ. ಮುಂದಿನ 5 ವರ್ಷದಲ್ಲಿ 40% ರಷ್ಟು ಪದವೀಧರರನ್ನಾಗಿಸುವ ಗುರಿ ಹೊಂದಿದ್ದೇವೆ ಎಂದರು. ಸರ್ಕಾರದ ಮುಖ್ಯ ಯೋಜನೆಗಳಲ್ಲೊಂದಾದ ವಸತಿ ಕಾಲೇಜು ಸ್ಥಾಪನೆಯಂತೆ ಹಂತ ಹಂತವಾಗಿ ಒಟ್ಟು 175 ವಸತಿ ಕಾಲೇಜುಗಳನ್ನು ಸ್ಥಾಪಿಸಲಾಗುವುದು. ರಾಷ್ಟ್ರದಲ್ಲಿ ಪ್ರಪ್ರಥಮವಾಗಿ ಕರ್ನಾಟಕದಲ್ಲಿ ವಸತಿ ಕಾಲೇಜು ಸ್ಥಾಪನೆಯಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ.ರಮಾನಾಥ ರೈ ಮಾತನಾಡುತ್ತಾ ಇವತ್ತು ಜಗತ್ತು ಮಾಹಿತಿ ತಂತ್ರಜ್ಞಾನದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ. ವಿದ್ಯಾರ್ಥಿಗಳ ಪ್ರಜ್ಞಾವಂತಿಕೆಯನ್ನು ಹೆಚ್ಚು ಮಾಡುವ ಉದ್ದೇಶದಿಂದ ಲ್ಯಾಪ್‍ಟಾಪ್ ನೀಡುತ್ತಿದೇವೆ. ತಿಳುವಳಿಕೆಯ ಕೊರತೆಯಿಂದಾಗಿ ಮತೀಯ ಸಾಮರಸ್ಯಕ್ಕೆ ಕಾರಣವಾಗಿದೆ. ಇದರ ಬಗ್ಗೆ ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರಬೇಕು. ನೀವು ಇಡುವ ಹೆಜ್ಜೆಯಿಂದ ಮುಂದಿನ ಭಾರತ ಹೇಗಿರುತ್ತದೆ ಎಂದು ನಿರ್ಧರಿತವಾಗುತ್ತದೆ ಎಂದು ಬಿ.ರಮಾನಾಥ ರೈ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ದಕ್ಷಿಣ ಶಾಸಕ ಜೆ.ಆರ್.ಲೋಬೋ ವಹಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಭೈರಪ್ಪ, ಮಂಗಳೂರು ಮೇಯರ್ ಕವಿತಾ ಸನಿಲ್, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಉದಯಶಂಕರ ಎಸ್. ಹಾಗೂ ಇನ್ನಿತರ ಇಲಾಖಾ ಅಧಿಕಾರಿಗಳು, ಗಣ್ಯರು ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group