(ನ್ಯೂಸ್ ಕಡಬ) newskadaba.com. ಚೆನ್ನೈ, ಮಾ20. ಸೂಪರ್ ಸ್ಟಾರ್ ರಜಿನಿಕಾಂತ್ ರವರ ಪುತ್ರಿ ಐಶ್ವರ್ಯಾ ರಜನಿಕಾಂತ್ ಅವರ ಲಾಕರ್ ನಿಂದ ಚಿನ್ನಾಭರಣ ಕಳುವುವಾದ ಬಗ್ಗೆ ತೆನಾಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಹೋದರಿಯ ಮದುವೆಗೆ ಚಿನ್ನಾಭರಣವನ್ನು ಧರಿಸಿದ ಬಳಿಕ ಅದನ್ನು ಬೇರೆ ಬೇರೆ ನಿವಾಸದಲ್ಲಿ ಐಶ್ವರ್ಯಾ ಅವರು ಲಾಕರ್ ನಲ್ಲಿ ಇಟ್ಟಿದ್ದಾರೆ. ಆಗಸ್ಟ್ 21, 2021 ರಲ್ಲಿ ಮಾಜಿ ಪತಿ ಧನುಷ್ ಅವರ ನಿವಾಸದಲ್ಲಿ ಲಾಕರ್ ಇಟ್ಟಿದ್ದರು. ಸೆಪ್ಟೆಂಬರ್ 2021 ರಲ್ಲಿ ಅದನ್ನು ಚೆನ್ನೈನ ಸೇಂಟ್ ಮೇರಿಸ್ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್ ಗೆ ಸ್ಥಳಾಂತರಿಸಿದ್ದಾರೆ. ಇದಾದ ನಂತರ ಏಪ್ರಿಲ್ 2022 ರಲ್ಲಿ ತಮ್ಮ ಪೋಯಸ್ ಗಾರ್ಡನ್ ನಿವಾಸದಲ್ಲಿ ಲಾಕರ್ ನ್ನು ಇಟ್ಟಿದ್ದಾರೆ. ಲಾಕರ್‌ನ ಕೀಗಳು ಸೇಂಟ್ ಮೇರಿಸ್ ರಸ್ತೆಯಲ್ಲಿರುವ ಅವರ ಫ್ಲಾಟ್‌ನಲ್ಲಿ ಉಳಿದಿತ್ತು. ಲಾಕರ್ ನಲ್ಲಿ ಬೆಲೆಬಾಳುವ ಚಿನ್ನಾಭರಣಗಳು ಇರುವುದು ಮತ್ತು ಅದನ್ನು ಯಾವೆಲ್ಲಾ ಮನೆಯಲ್ಲಿ ಇಟ್ಟಿದ್ದಾರೆ ಎನ್ನುವುದರ ಬಗ್ಗೆ ಚಾಲಕ ಹಾಗೂ ಮನೆಯ ಕೆಲ ಕೆಲಸದಾಳುಗಳಿಗೆ ತಿಳಿದಿತ್ತು ಎಂದು ಐಶ್ವರ್ಯಾ ಎಫ್ ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.
ಫೆ. 10,2023 ರಂದು ಐಶ್ವರ್ಯಾ ಲಾಕರ್ ತೆರೆದು ನೋಡಿದಾಗ ಅವರಿಗೆ ಶಾಕ್ ಆಗಿದೆ. ವಜ್ರದ ಸೆಟ್, ಪುರಾತನ ಕಾಲದ ಚಿನ್ನಾಭರಣಗಳು, ನವರತ್ನಂ ಸೆಟ್‌ಗಳು, ಬಳೆಗಳು ಸೇರಿದಂತೆ ಸುಮಾರು 3.60 ಲಕ್ಷ ರೂ.ಮೌಲ್ಯದ 60 ಪವನ್ ಚಿನ್ನಾಭರಣ ಕಳ್ಳತನವಾಗಿರುವುದನ್ನು ನೋಡಿದ್ದಾರೆ.
ತಾನು ಮನೆಯಿಂದ ದೂರವಿದ್ದಾಗ ಆಗಾಗ ತನ್ನ ಸೇಂಟ್ ಮೇರಿಸ್ ರಸ್ತೆಯಲ್ಲಿರುವ ಅವರ ಅಪಾರ್ಟ್ಮೆಂಟ್ ಗೆ ಭೇಟಿ ನೀಡುತ್ತಿದ್ದ ಕೆಲಸದಾಳು ಈಶ್ವರಿ, ಲಕ್ಷ್ಮಿ ಮತ್ತು ಚಾಲಕ ವೆಂಕಟ್, ಅವರ ಮೇಲೆ ತನಗೆ ಸಂಶಯವಿದೆ ಎಂದು ದೂರಿನಲ್ಲಿ ಹೇಳಿದ್ದು,ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಐಶ್ವರ್ಯಾ ಮನವಿ ಮಾಡಿದ್ದಾರೆ.