(ನ್ಯೂಸ್ ಕಡಬ) newskadaba.com ಕಡಬ, ಮಾ. 18. ಕೆಲ ದಿನಗಳ ಹಿಂದೆ ಕಡಬ ರೆಂಜಿಲಾಡಿ ಮೀನಾಡಿ ಸಮೀಪದ ನೈಲ ಎಂಬಲ್ಲಿ ಕಾಡಾನೆಯೊಂದು ಅಮಾಯಕರಿಬ್ಬರನ್ನು ಬಲಿತೆಗೆದುಕೊಂಡ ನಂತರದ ಬೆಳವಣಿಗೆಯಲ್ಲಿ ಸೆರೆ ಹಿಡಿಯಲಾದ ಕಾಡಾನೆಯೊಂದನ್ನು ಕೊಂಡೊಯ್ಯುವುದಕ್ಕೆ ಆಕ್ಷೇಪಿಸಿದ ನಾಗರಿಕರ ಗುಂಪೊಂದು ಎಲ್ಲಾ ಕಾಡಾನೆಗಳನ್ನೂ ಸೆರೆಹಿಡಿದು ಕೊಂಡೊಯ್ಯುವಂತೆ ಹೇಳಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿ ಅರಣ್ಯ, ಪೊಲಿಸ್ ಇಲಾಖಾ ವಾಹನಗಳಿಗೆ ಕಲ್ಲು ತೂರಾಟ ಮಾಡಿ ಹಾನಿ ಉಂಟು ಮಾಡಿದ್ದಲ್ಲದೆ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆಗೆ ಯತ್ನಿಸಿದ್ದ ಆರೋಪದಲ್ಲಿ ಬಂಧಿತ ಏಳು ಮಂದಿಗೆ ಜಿಲ್ಲಾ ನ್ಯಾಯಾಲಯ ಶರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಉಮೇಶ್ ಕಮರ್ಕಜೆ, ರಾಜೇಶ್ ಕಮರ್ಕಜೆ, ಜನಾರ್ದನ ರೈ ಕೊಲ್ಯ, ಕೋಕಿಲ ಕಮರ್ಕಜೆ, ತೀರ್ಥಕುಮಾರ ಕೋಲ್ಪೆ, ಗಂಗಾಧರ ಗೌಡ ಬಾರ್ಯ ಸಿರಿಬಾಗಿಲು ಮತ್ತು ಅಜಿತ್ ಕುಮಾರ್ ರೆಂಜಾಳ ಎಂಬವರನ್ನು ಕಡಬ ಪೊಲೀಸರು ಬಂಧಿಸಿದ್ದರು. ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆ ಕೋರಿ ವಕೀಲ ಮಹೇಶ್ ಕಜೆ ಅವರ ಮೂಲಕ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.