(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 15. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ 5 ಮತ್ತು 8ನೇ ತರಗತಿಗೆ ಇದೇ ಮಾರ್ಚ್ 27ರಿಂದ ಪಬ್ಲಿಕ್ ಪರೀಕ್ಷೆ ನಡೆಸಲು ರಾಜ್ಯ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.
ಈ ಬಾರಿ ಪಬ್ಲಿಕ್ ಪರೀಕ್ಷೆ ನಡೆಸಬಾರದು ಎಂದು ಖಾಸಗಿ ಶಾಲೆಗಳ ಒಕ್ಕೂಟವು ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಕೋರ್ಟ್ ಆದೇಶದಿಂದ ಒಕ್ಕೂಟದ ನಿಲುವಿಗೆ ಹಿನ್ನಡೆಯಾದಂತಾಗಿದೆ. ನ್ಯಾ. ನರೇಂದರ್ ಹಾಗೂ ನ್ಯಾ ಅಶೋಕ್ ಕಿಣಗಿ ಅವರನ್ನೊಳಗೊಂಡ ವಿಭಾಗೀಯ ಪೀಠದಲ್ಲಿ ಬುಧವಾರ ಸಂಜೆ ವಿಚಾರಣೆ ನಡೆದು ಕೋರ್ಟ್ ಪರೀಕ್ಷೆಗೆ ಅನುಮತಿ ನೀಡಿದೆ. ಈ ಬಾರಿಯಿಂದಲೇ ಪಬ್ಲಿಕ್ ಪರೀಕ್ಷೆ ನಡೆಸುವ ನಿರ್ಧಾರವನ್ನು ಏಕಸದಸ್ಯ ಪೀಠ ರದ್ದುಪಡಿಸಿತ್ತು. ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಅದರ ವಿಚಾರಣೆ ಎರಡು ದಿನಗಳ ಕಾಲ ನಡೆದು ಬುಧವಾರ ಸಂಜೆ ಕೋರ್ಟ್ ತನ್ನ ಅಭಿಪ್ರಾಯವನ್ನು ತಿಳಿಸಿದೆ.