(ನ್ಯೂಸ್ ಕಡಬ) newskadaba.com ಕಡಬ, ಜ.02. ರಕ್ತ ಮನುಷ್ಯನ ಮುಗಿಯದ ಸಂಪತ್ತು. ಎಲ್ಲಾ ದಾನಗಳಿಗಿಂತಲೂ ರಕ್ತದಾನ ಮಾನವ ಧರ್ಮದ ಪ್ರಮುಖದ ದಾನವಾಗಿದೆ ಎಂದು ಪುತ್ತೂರು ರೋಟರಿ ಬ್ಲಡ್ ಬ್ಯಾಂಕ್ನ ವೈದ್ಯಾಧಿಕಾರಿ ಡಾ|| ರಾಮಚಂದ್ರ ಭಟ್ ಹೇಳಿದರು.
ಅವರು ಆಲಂಕಾರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಆಶ್ರಯದಲ್ಲಿ ಆಲಂಕಾರು ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಭಾನುವಾರ ನಡೆದ ರಕ್ತದಾನ ಶಿಬಿರವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಮಾನವ ಇಂದು ತನ್ನ ಆಸ್ತಿ, ಸಂಪತ್ತು, ವಾಸ ಸ್ಥಳ, ಜೀವನ ಶೈಲಿಯನ್ನು ಒಂದು ದಿನದಲ್ಲಿ ಬದಲಾಯಿಸಬಹುದು. ಆದರೆ ಜನ್ಮದತ್ತವಾಗಿ ಬಂದಿರುವ ರಕ್ತದ ಗುಂಪನ್ನು ಜೀವನ ಪರ್ಯಂತ ಬದಲಾಯಿಸಲು ಸಾಧ್ಯವಿಲ್ಲ. ಮನುಷ್ಯ ತನ್ನ ರಕ್ತದ ಗುಂಪನ್ನು ಎಂದು ಮರೆಯಬಾರದು. ಇದಕ್ಕಾಗಿ ಮುಂದಿನ ದಿನಗಳಲ್ಲಿ ರಕ್ತದಾನಕ್ಕೂ ಆಧಾರ್ ನಂಬರ್ ಜೋಡಿಸಲಾಗುವುದು. ಈಗಾಗಲೇ ಪುತ್ತೂರು ಬ್ಲಡ್ ಬ್ಯಾಂಕ್ನಲ್ಲಿ ರಕ್ತ ವರ್ಗೀಕರಣ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.
ವಸಂತ ಬದಿಬಾಗಿಲು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಕ್ತದಾನ ಮಾಡುವ ಮನೋಧರ್ಮ ದೈವದತ್ತವಾಗಿ ಬರುತ್ತದೆ. ಇದನ್ನು ಯಾವ ಕಾರಣಕ್ಕೂ ತಡೆಹಿಡಿಯಲು ಸಾಧ್ಯವಿಲ್ಲ. ರಕ್ತಕ್ಕೆ ಯಾವ ಜಾತಿ, ಮತದ ಭೇದವಿಲ್ಲ. ಇದು ಮನುಕುಲದ ಅಮೃತಬಿಂದು ಎಂದರು. ಆಲಂಕಾರು ಬಿಲ್ಲವ ಸಂಘದ ಅಧ್ಯಕ್ಷ ದಯಾನಂದ ಕರ್ಕೇರ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಬಿಲ್ಲವ ಸಂಘದ ಜೊತೆ ಕಾರ್ಯದರ್ಶಿ ಸದಾನಂದ ಕುಮಾರ್, ಕೋಟಿ ಚೆನ್ನಯ ಮಿತ್ರವೃಂದ ಅಧ್ಯಕ್ಷ ರವಿ ಮಾಯಿಲ್ಗ, ಆಲಂಕಾರು ಬಿಲ್ಲವ ಸಂಘಧ ಉಪಾಧ್ಯಕ್ಷ ಸುಧಾಕರ ಪುಜಾರಿ, ಪೆರಾಬೆ- ಕುಂತೂರು ಬಿಲ್ಲವ ಸಂಘದ ಅಧ್ಯಕ್ಷ ಉದಯ.ಎಸ್.ಸಾಲ್ಯಾನ್, ಪುತ್ತೂರು ಯುವವಾಹಿನಿಯ ಅಧ್ಯಕ್ಷ ಉದಯ ಕುಮಾರ್ ಕೋಲಾಡಿ, ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲ್, ಪುತ್ತೂರು ಮೃತ್ಯುಂಜೇಶ್ವರ ದೇವಾಲದ ಆಡಳಿತ ಮೊಕ್ತೇಸರ ಮಹೇಶ್ಚಂದ್ರ.ಬಿ.ಪಿ, ಆಲಂಕಾರು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಜಯಂತ ಪುಜಾರಿ ನೆಕ್ಕಿಲಾಡಿ ಮೊದಲಾದವರು ಉಪಸ್ಥಿತರಿದ್ದರು.
ಸದಾನಂದ ಕುಮಾರ್ ಸ್ವಾಗತಿಸಿದರು. ಉದಯ ಸಾಲ್ಯಾನ್ ವಂದಿಸಿದರು. ವಿಜಯ ಕುಮಾರ್ ಕೆದಿಲ ಕಾರ್ಯಕ್ರಮ ನಿರೂಪಿಸಿದರು.