(ನ್ಯೂಸ್ ಕಡಬ) newskadaba.com ಕಡಬ, ಜ.02. ಸಂಸ್ಕಾರಯುತ ಶಿಕ್ಷಣ ನೀಡಿದಾಗ ಆ ಶಾಲೆಯು ಅಭಿವೃದ್ದಿಯೊಂದಿಗೆ, ಅಲ್ಲಿನ ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಮೂಡಿ ಬರಲು ಸಾಧ್ಯ ಎಂದು ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.
ಕಡಬ ಪಿಜಕಳ ಕಿ.ಪ್ರಾ.ಶಾಲೆಯ ವಾರ್ಷಿಕೋತ್ಸವದಂದು ಶಾಲಾ ಆವರಣ ಗೋಡೆ ಉದ್ಘಾಟಿಸಿ ಮಾತನಾಡಿದರು. ಪಿಜಕಳ ಸರಕಾರಿ ಶಾಲೆಯಾದರೂ ಯಾವುದೇ ಖಾಸಗಿ ಶಾಲೆಯ ವಿದ್ಯಾರ್ಥಿಗಿಂತ ಕಡಿಮೆ ಇಲ್ಲದಂತೆ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ, ಈ ಶಾಲೆಯ ಮುಖ್ಯ ಶಿಕ್ಷಕಿ ಚೇತನರವರು ಉತ್ತಮವಾಗಿ ಕಾರ್ಯನಿರ್ವಹಿಸುವುದರಿಂದ ಶಾಲೆಯ ಮಕ್ಕಳು ಪ್ರತಿಭಾನ್ವಿತರಾಗಿದ್ದಾರೆ, ಈ ಶಾಲೆಯು ಹಿ.ಪ್ರಾ.ಶಾಲೆಯಾಗಿ ಆಗಲಿ. ಸರಕಾರ ಶಾಲಾ ಶಿಕ್ಷಣಕ್ಕೆ ಬಹಳಷ್ಟು ಖರ್ಚು ಮಾಡುತ್ತಿರುವುದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿ ಪಟ್ಟಣ ಪ್ರದೇಶದ ವಿದ್ಯಾರ್ಥಿಗಿಂತ ಕಡಿಮೆ ಇಲ್ಲದಂತೆ ಶಿಕ್ಷಣ ಪಡೆಯುತ್ತಿದ್ದಾರೆ. ಪಿಜಕಳ ಶಾಲೆಯ ಬಗ್ಗೆ ಊರಿನವರು, ಎಸ್.ಡಿ.ಎಂ.ಸಿಯವರು, ಪೋಷಕರು, ಯುವಕ ಮಂಡಲದವರು ಸೇರಿಕೊಂಡು ಅಭಿವೃದ್ದಿಗೆ ಶ್ರಮಿಸುತ್ತಿರುವುದು ಶ್ಲಾಘನಿಯ ಎಂದರು.
ವಾರ್ಷಿಕೋತ್ಸವ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ಪಿ ಪಿ ವರ್ಗಿಸ್ ಮಾತನಾಡಿ, ಪಿಜಕಳ ಕಿ.ಪ್ರಾ.ಶಾಲೆ ಗ್ರಾಮೀಣ ಪ್ರದೇಶದ ಶಾಲೆಯಾಗಿದ್ದರೂ ಸಂಸ್ಕಾರ ಸಂಸ್ಕೃತಿಯನ್ನು ಅಳವಡಿಸಿಕೊಂಡು ಇಲ್ಲಿ ಉತ್ತಮ ಶಿಕ್ಷಣ ನೀಡುತ್ತಿರುವುದರಿಂದ ಇಲ್ಲಿನ ವಿದ್ಯಾರ್ಥಿಗಳು ಉತ್ತಮ ಪ್ರತಿಭೆಗಳಾಗಿದ್ದಾರೆ ಎಂದರು.
ತಾ.ಪಂ.ನಿಂದ ಈಗಾಗಲೇ ಶಾಲಾ ಅಭಿವೃದ್ದಿಗೆ ಅನುದಾನ ನೀಡಲಾಗಿದ್ದು, ಜಿ.ಪಂ.ನಿಂದ ಕೂಡ ಲಭ್ಯ ಅನುದಾನವನ್ನು ಒದಗಿಸಿಕೊಡಲಾಗುವುದು, ಶಾಲಾ ಬೇಡಿಕೆಯಂತೆ ಕುಡಿಯುವ ನೀರಿಗೆ ಕೊಳವೆ ಬಾವಿ ಹಾಗೂ ಟ್ಯಾಂಕ್ ವ್ಯವಸ್ಥೆಯನ್ನು ಮಾಡುವ ಬಗ್ಗೆ ಪ್ರಯತ್ನಿಸಲಾಗುವುದು ಎಂದರು. ತಾ.ಪಂ. ಮಾಜಿ ಅಧ್ಯಕ್ಷೆ, ಎಪಿಎಂಸಿ ನಿರ್ದೇಶಕಿ ಪುಲಸ್ತ್ಯಾ ರೈ, ತಾಲೂಕು ಶಿಕ್ಷಕರ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ , ಕಡಬ ಪ.ಪು. ಕಾಲೇಜಿನ ಆಂಗ್ಲ ಮಾದ್ಯಮ ಉಪನ್ಯಾಸಕ ಹರಿಶಂಕರ್, ನಿವೃತ್ತ ಮುಖ್ಯ ಗುರು, ಕಡಬ ಶ್ರೀ ದುರ್ಗಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಕಡಬ ಕ್ಲಸ್ಟರ್ ಮುಖ್ಯಸ್ಥ ಕುಮಾರ್ ಮಾತನಾಡಿ ಶುಭ ಹಾರೈಸಿದರು. ತಾ.ಪಂ. ಸದಸ್ಯ ಫಝಲ್ ಕೋಡಿಂಬಾಳ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯ ಗುರು ಸಾಂತಪ್ಪ ಗೌಡ ಪಿಜಕಳ, ನಿವೃತ್ತ ಸಿ.ಆರ್.ಪಿ ಸುಂದರ ಗೌಡ ಪಣೆಮಜಲು, ಗ್ರಾ.ಪಂ. ಸದಸ್ಯೆ ಸರೋಜಿನಿ ಆಚಾರ್, ಹರ್ಷಕೋಡಿ, ಎಸ್.ಡಿ.ಎಂ.ಸಿ ಅಧ್ಯಕ್ಷೆ ವಿಜಯಯತಿಂದ್ರ, ಮಾಜಿ ಅಧ್ಯಕ್ಷ ದಯಾನಂದ ಗೌಡ, ಶಾಲಾ ನಾಯಕಿ ದಿವ್ಯಶ್ರೀ ಉಪಸ್ಥಿತರಿದ್ದರು.
ಅಂಗನವಾಡಿ ಪುಟಾಣಿಗಳಿಗೆ, ಶಾಲಾ ವಿದ್ಯಾರ್ಥಿಗಳಿಗೆ, ಹಿರಿಯ ವಿದ್ಯಾರ್ಥಿಗಳಿಗೆ ನಡೆಸಿದ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶಾಲೆಯ ಅಭಿವೃದ್ದಿಗೆ ಪ್ರಮುಖ ಪಾತ್ರ ವಹಿಸಿದ್ದ ಶಾಲಾ ಮುಖ್ಯ ಶಿಕ್ಷಕಿ ಚೇತನಾ ಹಾಗೂ ಗೌರವ ಶಿಕ್ಷಕಿ ಪವಿತ್ರರವರನ್ನು ಶಾಲಾಭಿವೃದ್ದಿ ಹಾಗೂ ಪೋಷಕರ ವತಿಯಿಂದ ಸನ್ಮಾನಿಸಿಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಚೇತನಾ ವರದಿ ವಾಚಿಸಿದರು, ಸಹ ಶಿಕ್ಷಕಿ ಪವಿತ್ರ, ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ನೂಜಿಬಾಳ್ತಿಲ ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಆನಂದ.ಎ ಸ್ವಾಗತಿಸಿ, ಮರ್ದಾಳ ಸಿ.ಎ ಬ್ಯಾಂಕಿನ ನೌಕರ ಆನಂದ ಕೊಂಕ್ಯಾಡಿ ವಂದಿಸಿದರು. ಸಚಿನ್ ಪಿಜಕಳ ಕಾರ್ಯಕ್ರಮ ನಿರೂಪಿಸಿದರು.