ದ.ಕ: ಜಿಲ್ಲೆಯಲ್ಲಿ ತಾಪಮಾನ ಹೆಚ್ಚಳ ➤ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಗೆ ಡಿಸಿ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ 06. ಜಿಲ್ಲೆಯಲ್ಲಿ ತಾಪಮಾನ ಹೆಚ್ಚುತ್ತಿದ್ದು, ಎಲ್ಲಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ತಮ್ಮ ಅಧೀನದ ವಿದ್ಯಾರ್ಥಿ ನಿಲಯಗಳಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳ ಆರೋಗ್ಯದ ಹಿನ್ನೆಲೆ ಸೂಕ್ತ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ವಿಶೇಷ ಸೂಚನೆ ಹೊರಡಿಸಿದ್ದಾರೆ.

ಎಲ್ಲಾ ವಿದ್ಯಾರ್ಥಿಗಳಿಗೂ ಶುದ್ಧ ಕುಡಿಯುವ ನೀರನ್ನು ಕೊಡಬೇಕು. ಆದಷ್ಟು ಕುದಿಸಿ ಆರಿಸಿದ ನೀರನ್ನು ಕುಡಿಯುವಂತೆ ತಿಳಿಸಬೇಕು. ವಿದ್ಯಾರ್ಥಿ ನಿಲಯಗಳ ಅಡುಗೆ ಕೋಣೆಯನ್ನು ಮತ್ತು ಅಡುಗೆಗೆ ಬಳಸುವ ಪಾತ್ರೆ, ಪರಿಕರಗಳನ್ನು ಸ್ವಚ್ಛವಾಗಿಡಬೇಕು. ಅಡುಗೆ ತಯಾರಿಸುವವರು ಮತ್ತು ಆಹಾರ ಬಡಿಸುವವರು ಕೈಗಳ ಶುಚಿತ್ವ ಜೊತೆಗೆ ವೈಯಕ್ತಿಕ ಶುಚಿತ್ವ ಕಾಪಾಡಿಕೊಳ್ಳುವಂತೆ ನೋಡಿಕೊಳ್ಳಬೇಕು. ಪ್ರತೀ 6 ತಿಂಗಳಿಗೊಮ್ಮೆ ಅಡುಗೆ ಕೋಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರ ಮತ್ತು ಆಹಾರ ತಯಾರಕರ ಆರೋಗ್ಯ ತಪಾಸಣೆಯನ್ನು ನಡೆಸುವುದು ಸೇರಿದಂತೆ ವಿದ್ಯಾರ್ಥಿ ನಿಲಯಗಳಿಗೆ ವಿವಿಧ ಮೂಲಗಳಿಂದ ಸರಬರಾಜು ಆಗುವ ನೀರಿನ ಮಾದರಿಯನ್ನು ಪ್ರತೀ ತಿಂಗಳು ಪರೀಕ್ಷೆಗೆ ಒಳಪಡಿಸಿ, ಕುಡಿಯಲು ಮತ್ತು ಅಡುಗೆ ತಯಾರಿಕೆಗೆ ಸುರಕ್ಷಿತವಾದ ನೀರನ್ನು ಒದಗಿಸಲು ಅಗತ್ಯ ವಿದ್ಯಾರ್ಥಿ ನಿಲಯಗಳ ಶೌಚಾಲಯ, ಸ್ನಾನದ ಕೋಣೆಯನ್ನು ಸ್ವಚ್ಚವಾಗಿಡಬೇಕು ಎಂದರು. ಬೇಸಿಗೆ ಸಂದರ್ಭ ಆಹಾರ ಪದಾರ್ಥಗಳು ಬೇಗನೆ ಕೆಡುವ ಸಾಧ್ಯತೆ ಇರುವುದರಿಂದ, ಇದರ ಬಗ್ಗೆ ಹೆಚ್ಚಿನ ಗಮನಹರಿಸಿ ಎಲ್ಲಾ ವಿದ್ಯಾರ್ಥಿಗಳಿಗೂ ಬಿಸಿಯಾದ ಸುರಕ್ಷಿತ ಆಹಾರವನ್ನು ನೀಡಲು ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿ ನಿಲಯಗಳ ಶೌಚಾಲಯ, ಸ್ನಾನದ ಕೋಣೆಯನ್ನು ಸ್ವಚ್ಛವಾಗಿಡಬೇಕು. ಯಾವುದಾದರೂ ವಿದ್ಯಾರ್ಥಿಗೆ ಅನಾರೋಗ್ಯ ಕಂಡುಬಂದಲ್ಲಿ ಕೂಡಲೇ ವೈದ್ಯಾಧಿಕಾರಿ, ಆರೋಗ್ಯ ಇಲಾಖೆಯನ್ನು ಸಂಪರ್ಕಿಸಿ, ಸೂಕ್ತ ಚಿಕಿತ್ಸೆಯನ್ನು ನೀಡಬೇಕು. ಈ ಎಲ್ಲಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ.

Also Read  ಕಡಬ: ಜ.14, 15, 16ರ ಮೂರು ದಿನ ನಡೆಯುವ ಪಾದಯಾತ್ರೆ► ಬ್ಲಾಕ್ ಕಾಂಗ್ರೆಸ್ ಸಮಿತಿ ಸಭೆ, ಪಾದಯಾತ್ರೆ ಯಶಸ್ವಿಗೆ ಮನವಿ

error: Content is protected !!
Scroll to Top