(ನ್ಯೂಸ್ ಕಡಬ) newskadaba.com ಕಡಬ, ಡಿ.31. ಪುತ್ತೂರು ತಾಲೂಕಿನ ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಲ್ಯ ಎಂಬಲ್ಲಿ ಶನಿವಾರ ತಡ ರಾತ್ರಿ ಮನೆಯೊಂದಕ್ಕೆ ಬೆಂಕಿ ಬಿದ್ದು ಅಪಾರ ನಷ್ಟ ಉಂಟಾದ ಘಟನೆ ನಡೆದಿದೆ.
ಬಲ್ಯ ಉಮಾಮಹೇಶ್ವರಿ ದೇವಸ್ಥಾನ ಬಳಿಯ ರುಕ್ಮಯ್ಯ ಗೌಡ ಎಂಬವರಿಗೆ ಸೇರಿದ ಮನೆಗ ಯಾರೋ ಕಿಡಿಗೇಡಿಗಳು ಬೆಂಕಿ ಇಟ್ಟದ್ದಾರೆ ಎಂದು ಆರೋಪಿಸಿ ಠಾಣೆಗೆ ದೂರು ನೀಡಲಾಗಿದೆ. ರುಕ್ಮಯ್ಯ ಗೌಡರು ಕಾರ್ಕಳಕ್ಕೆ ಹೋಗಿದ್ದು. ಮನೆಯಲ್ಲಿ ಪತ್ನಿ, ಪುತ್ರ ಹಾಗೂ ಪತ್ರಿ ಇದ್ದರು. ಇವರು ರಾತ್ರಿ ಸುಮಾರು 9.30 ವೇಳೆಗೆ ನೆರಮನೆಗೆ ಹೋಗಿದ್ದು, ಹೋಗುವಾಗ ಮನೆಗೆ ಬೀಗ ಹಾಕದೆ, ಬಾಗಿಲು ಮುಚ್ಚಿಕೊಂಡು ಹೋಗಿದ್ದರು. ಇವರಿಗೆ 10.00 ಗಂಟೆ ರಾತ್ರಿಗೆ ಪಕ್ಕದ ಮನೆಯವರು ಫೋನ್ ಮಾಡಿ ನಿಮ್ಮ ಮನೆಗೆ ಬೆಂಕಿ ಬಿದ್ದಿದೆ ಎಂದು ವಿಷಯ ಮುಟ್ಟಿಸಿದರು. ತಕ್ಷಣ ಮನೆಗೆ ಬಂದಾಗ ಬೆಂಕಿ ಧಗಧಗನೆ ಹೊತ್ತಿ ಉರಿಯುತ್ತಿತ್ತು. ಮುಚ್ಚಿ ಹೋಗಿದ್ದ ಮನೆಯ ಬಾಗಿಲು ತೆರೆದಿತ್ತು ಕ್ಷಣಾರ್ಧದಲ್ಲಿ ಮನೆಯ ಮಾಡು, ಸಂಪುರ್ಣ ಸುಟ್ಟು ಕರಕಲಾಗಿತ್ತು. ಮನೆಯಲ್ಲಿದ್ದ ಬಟ್ಟೆ ಬರೆ, ನಗದು ಚಿನ್ನಗಳು ಹಾಗೂ ದಾಖಲೆ ಪತ್ರಗಳು ಬೆಂಕಿಗೆ ಆಹುತಿಯಾಗಿದ್ದವು. ಇದರಿಂದಾಗಿ ಲಕ್ಷಾಂತರ ರೂ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಭಾನುವಾರ ಕಡಬ ಠಾಣೆಗೆ ದೂರು ನೀಡಿರುವ ರುಕ್ಮಯ್ಯ ಗೌಡರು, ಸ್ಥಳೀಯ ವ್ಯಕ್ತಿಯೊಬ್ಬರು ಈ ಕೃತ್ಯವೆಸಗಿದ್ದಾರೆ ಎಂದು ಸಂಶಯ ವ್ಯಕ್ತಪಡಿದ್ದಾರೆ. ಇವರಲ್ಲಿ ಯಾವುದೋ ಕಾರಣಕ್ಕೆ ದ್ವೇಷ ಹೊಂದಿದ್ದ ಸಂಶಯಿತ ವ್ಯಕ್ತಿ ಈ ಹಿಂದೆ ಒಮ್ಮೆ ನಿಮ್ಮ ಮನೆಗೆ ಬೆಂಕಿ ಹಾಕಿ ನಿಮ್ಮನ್ನು ಜೀವಂತ ಸುಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ನೆಲ್ಯಾಡಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಸರ್ವೋತ್ತಮ ಗೌಡ ಸ್ಥಳಕ್ಕೆ ಭೇಟಿ ನೀಡಿ ಸಮಗ್ರ ತನಿಖೆ ನಡೆಸಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಅಗ್ರಹಿಸಿದ್ದಾರೆ. ಇವರೊಂದಿಗೆ ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿ ಸದಸ್ಯ ಮಹಮ್ಮದ್ ಆಲಿ ಉಪಸ್ಥಿತರಿದ್ದರು.
ಸ್ಥಳಕ್ಕೆ ಭೇಟಿ ನೀಡಿರುವ ಕಡಬ ಠಾಣಾಧಿಕಾರಿ ಪ್ರಕಾಶ್ ದೇವಾಡಿಗ ಹಾಗೂ ಸಿಬಂದಿಗಳು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.