(ನ್ಯೂಸ್ ಕಡಬ) newskadaba.com. ಬೆಂಗಳೂರು. ಫೆ.27. ಬೇಸಿಗೆಯಲ್ಲಿ ಕೋಳಿಗಳು ತಿನ್ನುವ ಆಹಾರದ ಪ್ರಮಾಣ ಕಡಿಮೆ ಮಾಡುತ್ತವೆ. ಇದರಿಂದ 35-37 ದಿನಗಳಲ್ಲಿ 2 ಕೆಜಿ ಬರಬೇಕಾದ ಕೋಳಿಯ ತೂಕ ಬೇಸಿಗೆಯಲ್ಲಿ 40 ರಿಂದ 50 ದಿನಗಳು ಆಗುತ್ತವೆ. ಕೋಳಿ ಸಾಕಾಣೆದಾರರು ಕೂಡ ಬಹಳ ಎಚ್ಚರದಿಂದ ಸಾಕಲು ಮುಂದಾಗುತ್ತಾರೆ. ಇದರ ಜತೆಗೆ ಬಿಸಿಲಿನ ಹೊಡೆತವನ್ನು ತಡೆದುಕೊಳ್ಳಲು ಸಾಧ್ಯವಾಗದೇ ಕೋಳಿಗಳ ಮರಣ ಸಂಖ್ಯೆ ಕೂಡ ಹೆಚ್ಚಾಗುತ್ತದೆ, ಎಂದು ಕರ್ನಾಟಕ ಪೌಲ್ಟ್ರಿ ಫಾರ್ಮಸ್ ಬ್ರೀಡರ್ಸ್ ಅಸೋಸಿಯೇಶನ್ ಕೆಪಿಎಫ್‍ಬಿಎ ಅಧ್ಯಕ್ಷ ಡಾ. ಸುಶಾಂತ್ ರೈ ತಿಳಿಸಿದರು.
ಬೇಸಿಗೆಯಲ್ಲಿ ಕೋಳಿಗಳ ಸಾವಿನ ಪ್ರಮಾಣ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಬ್ರಾಯ್ಲರ್ ಕೋಳಿಗಳು ಇತರ ಸಮಯದಲ್ಲಿ ಶೇ. 5ರಷ್ಟು ಸತ್ತರೆ ಬೇಸಿಗೆಯಲ್ಲಿ ಸಾವಿನ ಪ್ರಮಾಣ ಶೇ. 20ರಿಂದ 30 ಇರುತ್ತದೆ. ಇದರ ಜತೆಗೆ ಶ್ವಾಸಕೋಶದ ಸಮಸ್ಯೆ, ರಾಣಿಕೇತು ಕಾಯಿಲೆ ಬಂದರೆ ಮೂರು ತಿಂಗಳು ಫಾರ್ಮ್ ಮುಚ್ಚಬೇಕಾಗುತ್ತದೆ. ತಜ್ಞರು ಕೂಡ ಕೋಳಿ ಸಾಕಾಣೆದಾರರಿಗೆ 1,000 ಮರಿಗಳ ಬದಲು ಈ ಸಮಯದಲ್ಲಿ 800 ಮರಿಗಳನ್ನು ಸಾಕಿ ಎಂದು ಸಲಹೆ ನೀಡುತ್ತಾರೆ
“ಸಾಮಾನ್ಯವಾಗಿ ಇತರ ಸಮಯದಲ್ಲಿ ಕೋಳಿಯ ಸಾಮಾನ್ಯ ತೂಕ 2 ರಿಂದ 3 ಕೆಜಿ ಇರುತ್ತದೆ. ಆದರೆ ಬೇಸಿಗೆಯಲ್ಲಿ 1.8 ರಿಂದ 2 ಕೆಜಿ ತೂಗುತ್ತದೆ. ಜತೆಗೆ ಫಾರ್ಮ್‍ನಲ್ಲಿ ನೀರಿನ ಅಲಭ್ಯತೆ ಸೇರಿದಂತೆ ಹತ್ತಾರು ಕಾರಣಗಳು ಬೇಸಿಗೆಯಲ್ಲಿ ಕುಕ್ಕುಟೋದ್ಯಮವನ್ನು ಕಾಡುತ್ತವೆ. ಈ ಬಾರಿ ಮಾರ್ಚ್‍ನಲ್ಲಿ ಬಿಸಿಲಿನ ಪ್ರಮಾಣ ಏರಿಕೆಯಾಗಲಿದೆ ಎನ್ನುವ ಸೂಚನೆಯಿಂದ ಫಾರ್ಮ್‍ಗಳಲ್ಲಿ ಕೋಳಿಗಳ ಸಾವಿನ ಪ್ರಮಾಣ ಕೂಡ ಏರಲಿದೆ. ಬಿಸಿಲಿನ ತಾಪಕ್ಕೆ ಬ್ರಾಯ್ಲರ್ ಕೋಳಿಗಳಿಗಂತೂ ಬಹಳಷ್ಟು ಕಷ್ಟಕರವಾದ ಸ್ಥಿತಿ. ಇದರಿಂದ ಕುಕ್ಕುಟೋದ್ಯಮಕ್ಕೂ ಸಾಕಷ್ಟು ನಷ್ಟ ಉಂಟಾಗುತ್ತದೆ, ಎನ್ನುತ್ತಾರೆ ಡಾ. ಸುಶಾಂತ್ ರೈ.