(ನ್ಯೂಸ್ ಕಡಬ) newskadaba.com ಕಡಬ, ಡಿ.30. ಪುತ್ತೂರು ತಾಲೂಕಿನ ಕುಟ್ರಪ್ಪಾಡಿ ಗ್ರಾಮದ ಹೊಸ್ಮಠದಲ್ಲಿನ ಸ್ತ್ರೀಶಕ್ತಿ ಸಂಘದ ಸದಸ್ಯರ ಅಂಗಡಿಗೆ ಬೆಂಕಿ ಬಿದ್ದಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ಕೃತ್ಯವನ್ನು ಕಿಡಿಗೇಡಿಗಳು ಮಾಡಿರುವ ಸಂಶಯದ ಹಿನ್ನೆಯಲ್ಲಿ ಪೋಲೀಸರಿಗೆ ದೂರು ನೀಡಿದರೂ ಈ ಬಗ್ಗೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ಸ್ತ್ರೀ ಶಕ್ತಿ ಸಂಘದ ಕುಟ್ರುಪ್ಪಾಡಿ ಬ್ಲಾಕ್ ಪ್ರತಿನಿಧಿ ಜಯಶ್ರೀ ಪೋಲೀಸ್ ವೈಫಲ್ಯದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಅವರು ಶನಿವಾರ ಕಡಬ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪ್ರಕರಣ ನಡೆದು ಎರಡು ತಿಂಗಳಾದರೂ ಅಂಗಡಿಗೆ ಬೆಂಕಿ ಹಚ್ಚಿರುವ ಆರೋಪಿಗಳನ್ನು ಪೋಲೀಸರು ಬಂಧಿಸಿಲ್ಲ ಎಂದರು. ನಾವು ಗ್ರಾ.ಪಂ ಬಾಡಿಗೆ ಕಟ್ಟಡದಲ್ಲಿ ಫ್ಯಾನ್ಸಿ ಹಾಗೂ ಟೈಲರಿಂಗ್ ಅಂಗಡಿ ನಡೆಸುತ್ತಿದ್ದು ಇದಕ್ಕೆ ನವೆಂಬರ್ 13 ರಂದು ಮಧ್ಯರಾತ್ರಿ ಬೆಂಕಿ ಬಿದ್ದು ಅಪಾರ ನಷ್ಟುಂಟಾಗಿತ್ತು. ಅಂಗಡಿಯೊಳಗಿನ ಫ್ಯಾನ್ಸಿ ಐಟಮ್ಗಳು, ಹೊಲಿಗೆ ಯಂತ್ರಗಳು, ಸಾರ್ವಜನಿಕರು ಹೊಲಿಗೆಗಾಗಿ ನೀಡಿರುವ ಬಟ್ಟೆಗಳು, ದಾಖಲೆ ವಸ್ತಗಳು ಸುಟ್ಟು ಹೋಗಿದ್ದವು. ಈ ಬಗ್ಗೆ ಕಡಬ ಠಾಣೆಗೆ ದೂರು ನೀಡಲಾಗಿತ್ತು. ಪೋಲೀಸರು ಆಕಸ್ಮಿಕವಾಗಿ ಬೆಂಕಿ ಬಿದ್ದಿರುವುದಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೆಸ್ಕಾಂ ಇಲಾಖೆಯವರು ಆಗಮಿಸಿ ವಿದ್ಯುತ್ನಿಂದ ಅವಗಡವಾಗಿಲ್ಲ ಎಂದು ಹೇಳಿದ್ದರು. ಇದು ಆಕಸ್ಮಿಕವಾಗಿ ಬೆಂಕಿಬಿದ್ದು ಸುಟ್ಟು ಹೋಗಿರುವುದು ಆಗಿರುವುದಿಲ್ಲ ಎಂದು ಖಾತರಿಯಾದ ಬಳಿಕ ಇದೊಂದು ಕಿಡಿಗೇಡಿಗಳ ಕೃತ್ಯವೆಂದು ಕಡಬ ಪೋಲೀಸರಿಗೆ ಒತ್ತಡ ಹೇರಿ ತನಿಖೆ ನಡೆಸುವಂತೆ ಅಗ್ರಹಿಸಿದ್ದೆವು.
ಗ್ರಾಮ ಪಂಚಾಯಿತಿಯಿಂದಲೂ ಠಾಣೆಗೆ ದೂರು ನೀಡಲಾಗಿದೆ. ಆದರೆ ಆವರು ನಮ್ಮಿಂದ ಸಾಧ್ಯವಿಲ್ಲ ಎಂದು ಪೋಲೀಸರು ಕೈಕಟ್ಟಿ ಕುಳಿತಿದ್ದಾರೆ. ನಾವು ನಮಗೆ ಸಂಶಯವಿರುವ ವ್ಯಕ್ತಿಯ ಬಗ್ಗೆ ತಿಳಿಸಿದರೆ ಪೋಲೀಸರು ವಿಚಾರಣೆ ಮಾಡಿ ಬಿಟ್ಟಿದ್ದಾರೆ. ಯಾವುದೇ ತನಿಖೆ ನಡೆಸಿಲ್ಲ. ಪ್ರತೀ ಸಂದರ್ಭದಲ್ಲಿ ಕ್ಲೂ ಕೊಡಿ ಎಂದು ಹೇಳುವ ಪೋಲೀಸರು ನಮ್ಮಂತಹ ಬಡಪಾಯಿ ಸ್ತ್ರೀಯರ ಅಹವಾಲುಗಳನ್ನು ಕಡೆಗಣಿಸಿದ್ದಾರೆ. ನಮಗೆ ನ್ಯಾಯ ನೀಡುವ ಬದಲು ಕಳ್ಳರನ್ನು ರಕ್ಷಣೆ ಮಾಡುತ್ತಿದ್ದಾರೆ. ಕಡಬ ಠಾಣೆಯಲ್ಲಿ ಕಾನೂನಿಗೆ ಬೆಲೆಯಿಲ್ಲ, ಕೇವಲ ಹಣ ಹಾಗೂ ಅಂತಸ್ತು ಉಳ್ಳವರಿಗೆ ಮಣೆ ಹಾಕಲಾಗುತ್ತಿದೆ. ನಮ್ಮ ಅಂಗಡಿಗೆ ಬೆಂಕಿ ಬೀಳುವ ವಾರದ ಮುಂಚೆ ಹೊಸ್ಮಠದಲ್ಲಿ ಸೋಲಾರ್ ಬ್ಯಾಟರಿ ಕಳವಾಗಿದೆ, ಇದಾದ ಒಂದು ವಾರದಲ್ಲಿ ಕಳಾರದಲ್ಲಿ ಸೋಲಾರ್ ಬ್ಯಾಟರಿ ಕಳವಾಗಿದೆ. ಇಷ್ಟಾದರೂ ಕಡಬ ಪೋಲೀಸರು ಎಚ್ಚೆತ್ತುಕೊಂಡಿಲ್ಲ. ಈ ಬಗ್ಗೆ ಕಡಬ ಜನಸಂಪರ್ಕ ಸಭೆಯಲ್ಲಿ ಕೂಡಾ ವಿಷಯ ಪ್ರಸ್ತಾಪವಾಗಿದ್ದು, ಇದಕ್ಕೂ ಯಾವುದೇ ಬೆಲೆ ಸಿಕ್ಕಿಲ್ಲ. ನಾವು ಈ ಬಗ್ಗೆ ಈಗಾಗಲೇ ಉಪ್ಪಿನಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಅವರಿಗೆ ದೂರು ನೀಡಿದ್ದೇವೆ. ನಾವು ನಮ್ಮ ಅಂಗಡಿ ಕಳೆದುಕೊಂಡು ನಿರ್ಗತಿಕರಾಗಿದ್ದೇವೆ, ಇನ್ನು ನಾವು ಸುಮ್ಮನಿರುವುದಿಲ್ಲ. ಇನ್ನು ಹದಿನೈದು ದಿನಗಳಲ್ಲಿ ಕಿಡಿಗೇಡಿಗಳನ್ನು ಬಂಧಿಸದಿದ್ದಲ್ಲಿ ಕಡಬ ಠಾಣೆಯ ಎದುರು ಪ್ರತಿಭಟನೆ ನಡೆಸಲಾಗುವುದು. ಇದಕ್ಕೂ ಜಗ್ಗದಿದ್ದರೆ ಮುಂದೆ ಪೋಲೀಸ್ ವರಿಷ್ಠಾಧಿಕಾರಿ ಕಛೇರಿ ಹಾಗೂ ಜಿಲ್ಲಾಧಿಕಾರಿ ಕಛೇರಿ ಎದುರು ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದ ಜಯಶ್ರೀ ನಮಗೆ ಸ್ತ್ರೀ ಶಕ್ತಿ ಸಂಘ, ಗೊಂಚಲು ಸಮಿತಿ, ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿ, ಕಿಡ್ಸ್ ಸಂಸ್ಥೆ, ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ಯ ಕಡಬ ಶಾಖೆ ಹಾಗೂ ವಿವಿಧ ಸಂಘಸಂಸ್ಥೆಗಳು ನಮ್ಮ ನ್ಯಾಯಯುತವಾದ ಬೇಡಿಕೆಗೆ ಬೆಂಬಲ ಸೂಚಿಸಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಾನಕಿ ಸುಂದರ ಗೌಡ, ಉಪಾಧ್ಯಕ್ಷ ಆನಂದ ಪುಜಾರಿ, ಮಾಜಿ ಅಧ್ಯಕ್ಷ ತನಿಯ ಸಂಪಡ್ಕ, ದಲಿತ ಮುಖಂಡ ಗುರುವಪ್ಪ ಕಲ್ಲುಗುಡ್ಡೆ, ಕುಟ್ರುಪ್ಪಾಡಿ ಗೊಂಚಲು ಸಮಿತಿಯ ಅಧ್ಯಕ್ಷೆ ಆಲಿಸ್ ತೋಮಸ್, ಸದಸ್ಯೆ ಸುಗುಣ ದೇವಯ್ಯ, ಕಿಡ್ಸ್ ಸಂಸ್ಥೆಯ ಸರಸ್ವತಿ, ಮಹಮ್ಮದಾಲಿ, ಎಲ್ಸಿತೋಮಸ್ ಮುಂತಾದವರು ಉಪಸ್ಥಿತರಿದ್ದರು.