‘ಅಭಿಮನ್ಯು’ ಪಡೆಗೆ ಸಿಕ್ಕಿಬಿದ್ದ ನರಹಂತಕ ಆನೆ ➤ ಇಬ್ಬರನ್ನು ಕೊಂದಿರುವುದು ಇದೇ ಆನೆ: ಜಿಲ್ಲಾಧಿಕಾರಿ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಕಡಬ, ಫೆ.23. ಕಳೆದೆರಡು ದಿನಗಳಿಂದ ಅರಣ್ಯ ಅಧಿಕಾರಿಗಳಿಗೆ ತಲೆನೋವನ್ನು ತರಿಸಿದ್ದ ನರಹಂತಕ ಕಾಡಾನೆಯನ್ನು ಕೊನೆಗೂ ಸೆರೆ ಹಿಡಿಯಲಾಗಿದ್ದು, ಅಧಿಕಾರಿಗಳ ಶ್ರಮಕ್ಕೆ ಫಲ‌ ದೊರೆತಿದೆ.

ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೈಲ ಎಂಬಲ್ಲಿ ಇಬ್ಬರನ್ನು ಬಲಿ ತೆಗೆದುಕೊಂಡು ಸಾರ್ವಜನಿಕರಿಗೆ ಉಪಟಳ ನೀಡುತ್ತಿದ್ದ ನರಹಂತಕ ಕಾಡಾನೆಯನ್ನು ಸೆರೆ ಹಿಡಿಯಲಾಗಿದ್ದು, ಸಾರ್ವಜನಿಕರು ನಿರ್ಭೀತಿಯಿಂದ ಇರುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ತಿಳಿಸಿದ್ದಾರೆ.

ಅವರು ಕಡಬದಲ್ಲಿ ಕಾಡಾನೆಯನ್ನು ಸೆರೆ ಹಿಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಎರಡು ಜೀವವನ್ನು ಬಲಿ ತೆಗೆದುಕೊಂಡ ಆನೆಯನ್ನು ಕಡಬ ತಾಲೂಕಿನ ಕೊಂಬಾರಿನ ಮಂಡೆಕರ ಎಂಬಲ್ಲಿ ಗುರುವಾರದಂದು ಸೆರೆ ಹಿಡಿಯಲಾಗಿದೆ. ಅದರ ದಂತ ಹಾಗೂ ಕಾಲಿನ ಭಾಗದಲ್ಲಿ ರಕ್ತದ ಕಳೆ ಇರುವುದರಿಂದ ಇದೇ ಆನೆ ಇಬ್ಬರನ್ನು ಕೊಂದಿರುವುದು ಎಂಬುದು ಸ್ಪಷ್ಟಗೊಂಡಿದೆ. ಗಂಡು ಆನೆ ಇದಾಗಿದೆ. ಇದೀಗ ಆನೆಗೆ ಅರಿವಳಿಕೆ ನೀಡಿ ಸೆರೆ ಹಿಡಿಯಲಾಗಿದ್ದು, ನಾಳೆ ಸಂಜೆಯವರೆಗೆ ಅದರ ಮೇಲೆ ನಿಗಾ ವಹಿಸಿ ಬಳಿಕ ಈ ಕಾಡಾನೆಯನ್ನು ಆನೆಗಳ ಮೀಸಲು ಅರಣ್ಯಕ್ಕೆ ಸ್ಥಳಾಂತರಿಸಲಾಗುವುದು. ಸೆರೆ ಹಿಡಿಯಲಾದ ಆನೆ ವ್ಯಘ್ರಗೊಂಡಿದ್ದು, ಸೆರೆ ಹಿಡಿಯದೇ ಇರುತ್ತಿದ್ದಲ್ಲಿ ಇನ್ನೂ ಹಚ್ಚಿನ ಸಮಸ್ಯೆ ಮಾಡುವ ಸಾಧ್ಯತೆಯಿತ್ತು. ಕಾಡಾನೆ ಸೆರೆ ಕಾರ್ಯಾಚರಣೆಗೆ ಸಹಕರಿಸಿದ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಸಾರ್ವಜನಿಕರು ಮತ್ತು ಮಾಧ್ಯಮದವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Also Read  ಕರಾವಳಿಯಲ್ಲಿ 5 ದಿನ ಭಾರೀ ಮಳೆ ಸಾಧ್ಯತೆ

error: Content is protected !!
Scroll to Top